ಗುರುವಾಯೂರು, ಜೂ.8- ಲೋಕಸಭಾ ಮಹಾ ಸಮರದಲ್ಲಿ ದೇಶದ ಜನತೆ ನಕಾರಾತ್ಮಕ ಧೋರಣೆಯನ್ನು ಕಡೆಗಣಿಸಿದ್ದಾರೆ. ಸಕಾರಾತ್ಮಕ ಧೋರಣೆಗೆ ಮನ್ನಣೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯ ಸಾಧಿಸಿ ಎರಡನೆ ಅವಧಿಗೆ ಪ್ರಧಾನಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಕೇರಳದ ಗುರುವಾಯೂರಿಗೆ ಭೇಟಿ ನೀಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮೋದಿ ಮಾತನಾಡಿದರು.
ದೇಶದ 130 ಕೋಟಿ ಜನರ ರಕ್ಷಣೆಯು ಚುನಾಯಿತ ಸರ್ಕಾರದ ಹೊಣೆಗಾರಿಕೆಯಾಗಿರುತ್ತದೆ. ಈಗ ಆ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಪರವಾಗಿ ಮತ ಚಲಾಯಿಸಿದವರು ಅಥವಾ ಚಲಾಯಿಸದವರು ಎಲ್ಲರೂ ನಮ್ಮವರೇ. ಅವರನ್ನು ರಕ್ಷಿಸುವುದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ ಎಂದರು.
ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಮೇಧಾವಿ ರಾಜಕೀಯ ಪಂಡಿತರು ಚುನಾವಣಾ ಫಲಿತಾಂಶ ಪೂರ್ವ ನೀಡಿದ್ದ ಲೆಕ್ಕಾಚಾರ ಮತ್ತು ಸಮೀಕ್ಷೆಗಳನ್ನು ನಮ್ಮ ಮತದಾರರು ತಲೆಕೆಳಗಾಗಿ ಮಾಡಿದ್ದಾರೆ ಎಂದು ಮೋದಿ ಹೇಳಿದರು.
ಬಿಜೆಪಿ ಗೆಲುವಿಗೆ ಕಾರಣರಾದ ದೇಶದ ಪ್ರತಿಯೊಬ್ಬ ಮತದಾರರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕೇರಳ ನನಗೆ ನನ್ನ ಲೋಕಸಭಾ ಕ್ಷೇತ್ರವಾದ ವಾರಣಾಸಿಯಷ್ಟೇ ಬಹುಪ್ರಿಯ. ಈ ರಾಜ್ಯದ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.