ಬೆಂಗಳೂರು,ಜೂ.8- ಮೊಬೈಲ್ ಗೇಮ್ ಆಡುವ ಚಟಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ ಬೇಂದ್ರೆನಗರದ ನಿವಾಸಿ ಶೇಕ್ ಮಿಲನ್(32) ಕೊಲೆಯಾದ ಯುವಕ.
ರಾತ್ರಿ 10 ಗಂಟೆ ಸುಮಾರಿನಲ್ಲಿ ಶೇಕ್ ಮಿಲನ್ ನಾಲ್ಕೈದು ಯುವಕರ ಜೊತೆಗೂಡಿ ಇಲಿಯಾಸ್ ನಗರದ ರಸ್ತೆ ತಿರುವಿನಲ್ಲಿ ಕುಳಿತು ಹಣವನ್ನು ಕಟ್ಟಿಕೊಂಡು ಮೊಬೈಲ್ನಲ್ಲಿ ಲೂಡೋ ಗೇಮ್ ಆಡುತ್ತಿದ್ದರು.
ಈ ವೇಳೆ ಶೇಕ್ಮಿಲನ್ ರೆಡ್ ಬಟನ್ ಒತ್ತಿದ್ದರಿಂದ ಕೋಪಗೊಂಡ ಶೋಯಿಬ್ ಆತನೊಂದಿಗೆ ಜಗಳವಾಡಿ ಹೊಡೆದಿದ್ದಾನೆ.
ಇಷ್ಟಕ್ಕೆ ಜಗಳ ನಿಲ್ಲದೆ ಯುವಕರ ಮಧ್ಯೆ ಘರ್ಷಣೆ ಉಂಟಾಗಿ ಚಾಕುವಿನಿಂದ ಶೇಕ್ ಮಿಲನ್ ಕಿವಿ ಬಳಿ ಬಲವಾಗಿ ಇರಿದು ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಸ್ಥಳೀಯರು ನೋಡಿ ಜಯನಗರ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಶೇಕ್ ಮಿಲನ್ ಮೃತಪಟ್ಟಿದ್ದಾನೆ.
ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇಡಲಾಗಿದೆ. ಸುದ್ದಿ ತಿಳಿದ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಐದು ಮಂದಿ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.
ಹೆಚ್ಚಾಗುತ್ತಿರುವ ಮೊಬೈಲ್ ಗೇಮ್ ಚಟ:
ಈ ಹಿಂದೆ ಆನ್ಲೈನ್ ಗೇಮ್ ಆಡುತ್ತಾ ಹಲವರು ಪ್ರಾಣ ಕಳೆದುಕೊಂಡಿರುವ ಘಟನೆ ನಮ್ಮ ಕಣ್ಮುಂದೆ ಇದೆ. ಇದೀಗ ಮೊಬೈಲ್ಗಳಲ್ಲಿ ತರಾವರಿ ಗೇಮ್ಗಳು ಬಂದಿದ್ದು, ಗೃಹಿಣಿಯರು, ಕಾಲೇಜು ವಿದ್ಯಾರ್ಥಿಗಳು, ನೌಕರರು ಈ ಚಟಕ್ಕೆ ದಾಸರಾಗುತ್ತಿದ್ದಾರೆ.
ಹಣ ಕಟ್ಟಿಕೊಂಡು ಈ ಗೇಮ್ಗಳನ್ನು ಆಡುವ ಯುವಕರು ಸೋತಾಗ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದು, ಇದೀಗ ಇಂತಹ ಘಟನೆಯಿಂದಾಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವುದು ದುರಂತವೇ ಸರಿ.