ರಾಜಕೀಯದಲ್ಲಿ ಶತ್ರುಗಳು ಬೇರೆಲ್ಲೂ ಇರುವುದಿಲ್ಲ, ನಮ್ಮ ಪಕ್ಷದಲ್ಲೇ ಇರುತ್ತಾರೆ-ಮಾಜಿ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು, ಜೂ.8-ಲೋಕಸಭಾ ಚುನಾವಣೆಯಲ್ಲಿ ಮತದಾರರು ನನ್ನನ್ನು ಸೋಲಿಸಿಲ್ಲ, ನಮ್ಮ ಕೆಲ ರಾಜಕೀಯ ನಾಯಕರೇ ಸೋಲಿಸಿದರು ಎಂದು ಕಾಂಗ್ರೆಸ್‍ನ ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದರು.

ಗಾಂಧಿನಗರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭೋವಿ ಯುವಜನ, ಮಹಿಳಾ ಮತ್ತು ಕಾರ್ಮಿಕ ಪ್ರತಿನಿಧಿಗಳ ಚಿಂತನ ಸಭೆಯಲ್ಲಿ ವಕೀಲ ಶಂಕರಪ್ಪ ಬರೆದಿರುವ ಪ್ರವಾಸ ಕಥನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜಕೀಯದಲ್ಲಿ ಶತ್ರುಗಳು ಬೇರೆ ಎಲ್ಲೂ ಇರುವುದಿಲ್ಲ. ನಮ್ಮ ಪಕ್ಕದಲ್ಲೇ ಇರುತ್ತಾರೆ. ಅದೂ ನಮ್ಮ ಜನಾಂಗದವರೆ ಆಗಿರುತ್ತಾರೆ. ನಾವು ಇದನ್ನು ಮೆಟ್ಟಿ ನಿಲ್ಲಬೇಕು. ಮೊದಲು ಕೋಲಾರದಲ್ಲಿ ನಮ್ಮ ಅಸ್ತಿತ್ವವಿತ್ತು ಆದರೆ ನಮ್ಮ ಒಳ ಜಗಳದಿಂದ ನಮ್ಮ ಅಸ್ತಿತ್ವ ಕಳೆದುಕೊಂಡಿದ್ದೇವೆ. ನಮ್ಮವರ ವಿರುದ್ಧ ನಮ್ಮವರನ್ನೇ ಎತ್ತಿ ಕಟ್ಟುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೋವಿ ಅಭಿವೃದ್ಧಿ ನಿಗಮದಿಂದ ಸಮುದಾಯ ಸರಿಯಾದ ಉಪಯೋಗ ಪಡೆಯುತ್ತಿಲ್ಲ. ಭೋವಿ ಜನಾಂಗದ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವಂತಹ ಸಂಘಟನೆ ಕಟ್ಟಬೇಕಿದೆ ಎಂದು ಕರೆ ನೀಡಿದರು.

ಇದೇ ವೇಳೆ ಪ್ರತಿ ಜಿಲ್ಲೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಕಚೇರಿಗಳಾಗಬೇಕು, ಇದಕ್ಕೆ ಸರ್ಕಾರ ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ವಕೀಲ, ಬರಹಗಾರ ಎಂ.ಶಂಕರಪ್ಪ ಅವರಿಗೆ ಕೋಲಾರ ಲೋಕಸಭಾ ಬಿಜೆಪಿ ಟಿಕೆಟ್ ತಪ್ಪಿಸಿದ್ದು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಎಂದು ರಾಜಕೀಯ ವಿಶ್ಲೇಷಕ ಮಹದೇವ್ ಪ್ರಸಾದ್ ಆರೋಪಿಸಿದರು.

ಲಿಂಬಾವಳಿ ಜೊತೆ ಎಂ.ಶಂಕರಪ್ಪ ಇದ್ದಿದ್ದರೆ ಭೋವಿ ಸಮುದಾಯಕ್ಕೆ ಆನೆ ಬಲ ಬರುತ್ತಿತ್ತು. ಈ ಸಮುದಾಯದವರು ಶ್ರಮಜೀವಿಗಳು. ಕೆಆರ್‍ಎಸ್ ಅಣೆಕಟ್ಟು ನಿರ್ಮಾಣದ ಹಿಂದೆ ಭೋವಿ ಜನಾಂಗದ ಶ್ರಮವಿದೆ. ಇದನ್ನು ಗಮನಿಸಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮುದಾಯಕ್ಕೆ ಮೀಸಲಾತಿ ನೀಡಿದ್ದರು ಎಂದು ಹೇಳಿದರು.

ದೇವರಾಜ ಅರಸು ಬಂದ ಮೇಲೆ ಶೋಷಿತ ವರ್ಗಕ್ಕೆ ಹೆಚ್ಚು ಒತ್ತು ನೀಡಿದರು.ಇನ್ನೂ ಎಂ.ಶಂಕರಪ್ಪ ಅವರ ಪ್ರವಾಸ ಕಥನ ಪುಸ್ತಕ ಸರ್ವಕಾಲಿಕ ದಾಖಲೆಯಾಗಲಿದೆ.

ಈ ಕೃತಿಯಿಂದ ಜಗತ್ತಿನ ಮೂಲಗಳ ದರ್ಶನವಾಗುತ್ತದೆ. ಅವರು ವಿದೇಶಿ ಪ್ರವಾಸ ಮಾಡಿ ಅಲ್ಲಿನ ಸಂಸ್ಕøತಿ, ಕಾನೂನು, ಇತಿಹಾಸ, ಪಾರಂಪರಿಕತೆಯನ್ನು ಅಧ್ಯಯನ ಮಾಡಿ ಅವುಗಳನ್ನು ಟಿಪ್ಪಣಿ ಮಾಡಿದ್ದಾರೆ ಎಂದರು.

ವಕೀಲ ಶಂಕರಪ್ಪ ಮಾತನಾಡಿ, ನಮ್ಮ ಸಮುದಾಯದ ಮೂಲ ವೃತ್ತಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬರುತ್ತಿವೆ. ಕೆಲ ರಾಜಕಾರಣಿಗಳಿಂದ ನಮ್ಮ ಸಮುದಾಯವನ್ನು ತಿರಸ್ಕರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ, ನಟ, ನಿರ್ದೇಶಕ ಎಸ್.ನಾರಾಯಣ್, ಖ್ಯಾತ ಗಾಯಕ ಶಶಿಧರ್ ಕೋಟೆ, ವೇದಿಕೆಯ ರಾಜ್ಯಾಧ್ಯಕ್ಷ ವೈ. ಕೊಟ್ರೇಶ್ ಹಾಗೂ ಬಾಗೇಪಲ್ಲಿ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ