ಬೆಂಗಳೂರು,ಜೂ.6- ಬರಗಾಲದಿಂದ ಸಂಕಷ್ಟ ಉಂಟಾಗಿರುವುದರಿಂದ ಸರ್ಕಾರ ದೇವರ ಮೊರೆಹೋಗಿದೆ ಇದಕ್ಕೂ ಆಕ್ಷೇಪಿಸಿ ಪೂಜೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಬಹಳಷ್ಟು ಸಚಿವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾನಾಡಿದ ಸಚಿವರಾದ ಸಾ.ರಾ.ಮಹೇಶ್, ದೇವರಿದ್ದಾನೆ ಎಂಬುದು ಜನರ ನಂಬಿಕೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ.ಪ್ರಧಾನಿ ಮೋದಿ ಸೇರಿದಂತೆ ನಾವೆಲ್ಲರೂ ದೇವರ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತೇವೆ. ಸಮಸ್ಯೆ ಬಂದಾಗ ಪೂಜೆ ಮಾಡಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಸಚಿವ ಬಂಡೆಪ್ಪ ಕಾಶಂಪರ್ ಮಾತನಾಡಿ, ಬರಪರಿಸ್ಥಿತಿ ವಿಪರೀತವಾಗಿದೆ.ನಮಗೆ ದೇವರ ಮೊರೆಹೋಗುವುದು ಅನಿವಾರ್ಯವಾಗಿದೆ. ಹೀಗಾಗಿ ಧಾರ್ಮಿಕ ದತ್ತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪರ್ಜನ್ಯ ಹೋಮ ನಡೆಸಲಾಗಿದೆ ಎಂದರು.
ಜನರ ಒಳ್ಳೆಯದಕ್ಕಾಗಿ ಪೂಜೆ ಮಾಡಿಸಿದ್ದೇವೆ ಇದನ್ನೂ ಆಕ್ಷೇಪಿಸುವುದು ಸರಿಯಲ್ಲ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಭಾರತ ಹಲವಾರು ವೈಶಿಷ್ಟ್ಯ ಸಂಸ್ಕøತಿಗಳ ದೇಶ. ಬಹುಜನರು ದೇವರ ಆರಾಧನೆಯನ್ನು ನಂಬುತ್ತಾರೆ. ಹಾಗಿದ್ದಾಗ ಮಳೆಗಾಗಿ ಪ್ರಾರ್ಥನೆ ಮಾಡುವುದು ತಪ್ಪಲ್ಲ. ಬಹುಜನರ ನಂಬಿಕೆಗಳನ್ನು ಸರ್ಕಾರ ಗೌರವಿಸಿದೆ ಎಂದರು.
ಡಿ.ಕೆ.ಶಿವಕುಮಾರ್ ಕೂಡ ಮಳೆಗಾಗಿ ಪೂಜೆ ಮಾಡಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.