ಡಿ.ಕೆ.ಶಿವಕುಮಾರ್‍ರವರಿಗೆ ಸಾರಥ್ಯ ಕೊಡಲು ಮುಂದಾದ ಕಾಂಗ್ರೇಸ್ ಹೈಕಮಾಂಡ್

ಬೆಂಗಳೂರು,ಜೂ 6- ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಸಾರಥ್ಯ ಕೊಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಮೈತ್ರಿ ಆಡಳಿತವಿದ್ದರೂ 28 ಲೋಕಸಭಾ ಕ್ಷೇತ್ರದಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾದ ಕಾಂಗ್ರೆಸ್ ಪಕ್ಷ ಈಗ ಪಕ್ಷವನ್ನು ಪುನಃ ಸಂಘಟಿಸಲು ಮುಂದಾಗಿದೆ.

ಮುಂಬರುವ ಚುನಾವಣೆಗಳನ್ನು ಎದುರಿಸಲು ಸಮರ್ಥ ನಾಯಕನ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು ಕೆಪಿಸಿಸಿ ಅಧ್ಯಕ್ಷವನ್ನು ಬದಲಾವಣೆ ಮಾಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಈ ಹೊಣೆ ಹೊರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈವರೆಗೆ ಹೈಕಮಾಂಡ್ ವಹಿಸಿರುವ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಯಶಸ್ವಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಪಟ್ಟ ನೀಡುವುದರಿಂದ ಪ್ರಭಾವಿ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಲ್ಲುತ್ತದೆ ಎಂಬ ಲೆಕ್ಕಾಚಾರ ಹೈಕಮಾಂಡ್‍ನದ್ದಾಗಿದೆ. ಈ ವಿಷಯವನ್ನು ಡಿ.ಕೆ.ಶಿವಕುಮಾರ್ ಅವರಿಗೂ ಕೂಡ ವರಿಷ್ಠರು ತಿಳಿಸಿದ್ದಾರೆ.ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಹಿಡಿತವಿಲ್ಲ. ಹಿಡಿತವನ್ನು ಸಾಧಿಸುವ ಸಾಮಥ್ರ್ಯ ಡಿ.ಕೆ.ಶಿವಕುಮಾರ್ ಅವರಿಗಿದೆ. ರಾಜಕೀಯ ಲೆಕ್ಕಾಚಾರ ಹಾಕಿ ಹೈಕಮಾಂಡ್ ನಾಯಕರು ಈ ಚರ್ಚೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಇರಾದೆ ಹೈಕಮಾಂಡ್ ನಾಯಕರಿಗಿದೆ ಎಂದು ತಿಳಿದು ಬಂದಿದೆ.

ಈ ನಡುವೆ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ಮುಖಂಡರಾದ ಎಂ.ಬಿ.ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಮಾತುಗಳು ಕೇಳಿಬಂದಿವೆ. ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಚುನಾವಣೆಯಿಲ್ಲ. ಈಗ ಅಧ್ಯಕ್ಷಗಿರಿ ಜವಾಬ್ದಾರಿ ಹೊರಲು ಯಾರೂ ಮುಂದೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಹೈಕಮಾಂಡ್ ಆದೇಶವನ್ನು ಯಾರೂ ಧಿಕ್ಕರಿಸುವುದಿಲ್ಲ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ