ಬೆಂಗಳೂರು, ಜೂ.5-ಲೋಕಸಭಾ ಅಧಿವೇಶನ ಮುಗಿಯುವವರೆಗೆ ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದು ಬೇಡ ಎಂಬ ಸಂದೇಶ ಹೈಕಮಾಂಡ್ ವರಿಷ್ಠರಿಂದ ರವಾನೆಯಾದ ಬೆನ್ನಲ್ಲೇ ಯುಟರ್ನ್ ಹೊಡೆದಿರುವ ರಾಜ್ಯ ಬಿಜೆಪಿ ಇದೀಗ ಬರಗಾಲದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದೆ.
ಇಂದು ಸಂಜೆ ನಾಲ್ಕು ಗಂಟೆಗೆ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು,ಅಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದು ಮೂಲಗಳು ಹೇಳಿವೆ.
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದ್ದು ಈ ಸರ್ಕಾರ ಉಳಿಯುವುದು ಕಾಂಗ್ರೆಸ್-ಜೆಡಿಎಸ್ನ ಹಲವು ನಾಯಕರಿಗೂ ಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ಅದು ತನ್ನಷ್ಟಕ್ಕೆ ತಾನೇ ಕುಸಿದು ಬೀಳಲು ಅವಕಾಶ ನೀಡಬೇಕೇ ಹೊರತು ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಬಾರದು.
ಹೀಗಾಗಿ ಸರ್ಕಾರ ಇಂದು ಪತನವಾಗುತ್ತದೆ, ನಾಳೆ ಪತನವಾಗುತ್ತದೆ ಎಂಬ ಲೆಕ್ಕಾಚಾರಗಳನ್ನು ಬದಿಗಿಟ್ಟು ನಿಮ್ಮ ಪಾಡಿಗೆ ಸರ್ಕಾರದ ವೈಫಲ್ಯಗಳ ವಿರುದ್ದ ಹೋರಾಟ ನಡೆಸಿ ಎಂದು ಪಕ್ಷದ ವರಿಷ್ಠರು ರಾಜ್ಯದ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಇಂದು ಸಂಜೆ ನಡೆಯಲಿರುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವೈಫಲ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದ್ದು ಒಟ್ಟಾರೆಯಾಗಿ ಬರಗಾಲದ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ವಿಫಲವಾಗಿದೆ.ಅದರ ಈ ವೈಫಲ್ಯದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಬೇಕು.
ಈ ಹೋರಾಟಕ್ಕೆ ಪೂರಕವಾಗಿ ಸಭೆಯಲ್ಲಿ ವಿವರವಾದ ಚರ್ಚೆ ನಡೆಸಬೇಕು. ಅಗತ್ಯ ಬಿದ್ದರೆ ಬರಗಾಲದ ಅಧ್ಯಯನಕ್ಕೆ ವಿಶೇಷ ತಂಡಗಳನ್ನು ರಚಿಸಿ,ಎಲ್ಲ ಶಾಸಕರು ಪರಿಸ್ಥಿತಿಯನ್ನು ವೀಕ್ಷಿಸಿ ಬರಬೇಕು.
ಇದೇ ರೀತಿ ರಾಜ್ಯ ಸರ್ಕಾರ ಹಲವು ಅನಗತ್ಯ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಇದರ ಅನುಷ್ಟಾನದ ಹಿಂದೆ ವ್ಯಾಪಕ ಅಕ್ರಮಗಳು ನಡೆದಿರುವ ಸಂಶಯವಿದ್ದು ಇದರ ಕುರಿತೂ ಧ್ವನಿಯೆತ್ತಬೇಕು ಎಂದು ನಿರ್ಧರಿಸಲಾಗಿದೆ.