ಕಾಂಗ್ರೇಸ್‍ನಲ್ಲಿ ಬುಗಿಲೆದ್ದ ಮೂಲ ಕಾಂಗ್ರೇಸ್ ಮತ್ತು ವಲಸೆ ಕಾಂಗ್ರೇಸ್‍ರವರ ಕಚ್ಚಾಟ

ಬೆಂಗಳೂರು, ಜೂ.5- ರಾಜ್ಯ ಕಾಂಗ್ರೆಸ್‍ನಲ್ಲಿ ಭುಗಿಲೆದ್ದಿರುವ ಮೂಲ ಕಾಂಗ್ರೆಸ್ ಮತ್ತು ವಲಸಿಗ ಕಾಂಗ್ರೆಸ್ ನಾಯಕರ ನಡುವಣ ಕಚ್ಚಾಟದ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರದ ಸಂಪುಟ ಪುನರ್ ರಚನೆ ಪ್ರಕ್ರಿಯೆ ಮುಂದಕ್ಕೆ ಹೋಗಿದೆ.

ಸಂಪುಟ ಪುನರ್ ರಚನೆ ಇಲ್ಲವೇ ವಿಸ್ತರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಪಕ್ಷೇತರರಿಗೆ ಮಣೆ ಹಾಕಲಾಗುತ್ತದೆ ಮತ್ತು ವಲಸಿಗ ಕಾಂಗ್ರೆಸ್ಸಿಗರಿಗೆ ಅವಕಾಶ ಲಭ್ಯವಾಗುತ್ತದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರು ಬಂಡಾಯದ ಕಹಳೆ ಊದಿದ್ದರು.

ಇದೇ ಕಾರಣಕ್ಕಾಗಿ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿರುದ್ಧ ಹರಿಹಾಯ್ದಿದ್ದ ರೋಷನ್ ಬೇಗ್, ರಾಮಲಿಂಗಾರೆಡ್ಡಿ ಮತ್ತಿತರ ನಾಯಕರಿಗೆ ವಿವಿಧ ಕಾರಣಗಳಿಗಾಗಿ ಹಿರಿಯ ನಾಯಕರು ಒತ್ತಾಸೆ ನೀಡಿದ್ದರು.

ಲೋಕಸಭಾ ಚುನಾವಣೆಯಲ್ಲಿನ ಪಕ್ಷದ ಹೀನಾಯ ಸೋಲಿಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಕಾರಣ ಎಂಬ ಅಸಮಾಧಾನ ಈ ಹಿರಿಯ ನಾಯಕರಿಗೂ ಇದ್ದುದರಿಂದ ವಲಸಿಗ ಕಾಂಗ್ರೆಸ್ಸಿಗರಿಂದ ಮೂಲ ಕಾಂಗ್ರೆಸ್ಸಿಗರಿಗೆ ಕಷ್ವವಾಗಲಿದೆ. ಕೆಪಿಸಿಸಿ ಅಧ್ಯಕ್ಷರೂ ಅವರ ಪ್ರತಿನಿಧಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಖರ್ಗೆ,ವೀರಪ್ಪ ಮೊಯ್ಲಿ, ಕೆ.ಹೆಚ್.ಮುನಿಯಪ್ಪ ಸೇರಿದಂತೆ ಹಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಹಿರಿಯ ನಾಯಕರ ಈ ಬಂಡಾಯವನ್ನು ಮೊಳಕೆಯಲ್ಲೇ ಚಿವುಟುವ ಮಾರ್ಗೋಪಾಯಗಳ ಕುರಿತು ಚರ್ಚಿಸಿದ್ದರು.

ಕಾಂಗ್ರೆಸ್‍ನಲ್ಲಿ ನಡೆಯುತ್ತಿದ್ದ ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಒಂದು ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ಬಿಜೆಪಿ,ಕೇಂದ್ರದ ಸಚಿವ ಸಂಪುಟದಲ್ಲಿ ಒಬ್ಬ ದಲಿತರಿಗೂ ಸ್ಥಾನ ನೀಡಲಾಗಿಲ್ಲ ಎಂದಿದ್ದೀರಲ್ಲ ಟ್ವಿಟರ್ ರಾಮಯ್ಯನವರೇ, ಮುಖ್ಯಮಂತ್ರಿ ಹುದ್ದೆ ದಲಿತರಿಗೆ ಸಿಗುವುದನ್ನೇಕೆ ತಪ್ಪಿಸಿದಿರಿ ಎಂದು ಕಿಚಾಯಿಸಿದ್ದರು.

ಇದೆಲ್ಲದರ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ನಡೆದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, 2013ರಲ್ಲಿ ನಾನು ಸಿಎಂ ಆಗಿದ್ದು ಶಾಸಕಾಂಗ ಪಕ್ಷದ ಬೆಂಬಲ ಹಾಗೂ ಹೈಕಮಾಂಡ್ ಬೆಂಬಲದಿಂದ ಎಂದು ಹೇಳಿದರು.

ಶಾಸಕರು ಹಾಗೂ ಹೈಕಮಾಂಡ್ ಬಯಸಿದ್ದರಿಂದ ನಾನು ಸಿಎಂ ಆದೆನೇ ಹೊರತು ದಲಿತ ನಾಯಕರಾದ ಪರಮೇಶ್ವರ್ ಅವರಾಗಲೀ, ಮಲ್ಲಿಕಾರ್ಜುನ ಖರ್ಗೆ ಅವರಾಗಲೀ ಸಿಎಂ ಆಗುವುದು ಬೇಡ ಎಂದು ಎಲ್ಲಿ ಹೇಳಿದ್ದೆ ಅಂತ ಪ್ರಶ್ನಿಸಿದರು.

ಖರ್ಗೆಯವರು ಸಿಎಂ ಆಗಲಿ, ಪರಮೇಶ್ವರ್ ಅವರೂ ಸಿಎಂ ಆಗಲಿ, ಯಾರು ಸಿಎಂ ಆದರೂ ನಾನೇಕೆ ಬೇಡ ಎನ್ನಲಿ ಎಂದವರು ಪ್ರಶ್ನಿಸಿದರು.

ಎಲ್ಲರೂ ಸಿಎಂ ಆಗಲಿ ಎಂಬುದೇ ನನ್ನ ಬಯಕೆ. ಕಾಲ ಕೂಡಿ ಬಂದಾಗ ಅವರು ಸಿಎಂ ಆಗುತ್ತಾರೆ. ಹೈಕಮಾಂಡ್ ಬಯಸಿದಾಗ, ಶಾಸಕರು ಬಯಸಿದಾಗ ಅವರು ಸಿಎಂ ಆಗಲೇಬೇಕಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಪ್ರಶ್ನೆಯೇ ಇಲ್ಲ. ಶಿವಳ್ಳಿಯವರ ನಿಧನದಿಂದ ತೆರವಾಗಿರುವ ಒಂದು ಸ್ಥಾನವನ್ನು ತುಂಬುವ ಬಗ್ಗೆ ಚರ್ಚೆ ನಡೆದಿದೆ ಅಷ್ಟೇ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅದರೆ ಸಂಪುಟ ವಿಸ್ತರಣೆ, ಪುನರ್ ರಚನೆ ಎಲ್ಲ ಸಧ್ಯಕ್ಕೆ ನಡೆಯುವುದಿಲ್ಲ ಎಂದ ಅವರು, ಹಿರಿಯರನ್ನು ಕಡೆಗಣಿಸಲಾಗಿದೆ ಎಂಬ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮಾತಿಗೆ ಪ್ರತಿಕ್ರಿಯಿಸಿ,ಮುಂದೆ ಸಂಪುಟ ಪುನರ್ ರಚನೆಯಾದಾಗ ರಾಮಲಿಂಗಾರೆಡ್ಡಿ ಅವರು ಮಂತ್ರಿಯಾಗುತ್ತಾರೆ ಎಂದು ವಿವರಿಸಿದರು.

ನಾನು ನಾಳೆಯೇ ಅವರ ಜತೆ ಮಾತನಾಡುತ್ತೇನೆ ಎಂದ ಅವರು, ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ.

ಸ್ಪರ್ಧಿಸಿದವರು ಅವರು, ಪ್ರಚಾರ ಮಾಡಿದವರು ಅವರ ಪಕ್ಷದವರು,ಹೀಗಿರುವಾಗ ನಾನು ಹೇಗೆ ಅವರ ಸೋಲಿಗೆ ಕಾರಣನಾಗುತ್ತೇನೆ ಎಂದು ಅವರು ಪ್ರಶ್ನಿಸಿದರು.

ನಾನು ದೇವೇಗೌಡರ ಸೋಲಿಗೆ ಕಾರಣ ಎನ್ನುವುದಾದರೆ ಮೈಸೂರಿನಲ್ಲಿ ನಮ್ಮ ಪಕ್ಷದ ಕ್ಯಾಂಡಿಡೇಟ್ ವಿಜಯ್‍ಶಂಕರ್ ಅವರ ಸೋಲಿಗೆ ಯಾರು ಕಾರಣ?ಎಂದು ಪ್ರಶ್ನಿಸಿದರಲ್ಲದೆ,ಅವರವರ ಸೋಲಿಗೆ ಅವರವರೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ತಮ್ಮ ವಿರುದ್ಧ ಗುಡುಗಿರುವ ರೋಷನ್ ಬೇಗ್ ಅವರ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ನಮ್ಮ ಪಕ್ಷದವರೇ ಅಲ್ಲ,ಹೀಗಿರುವಾಗ ಅವರ ಹೇಳಿಕೆಗಳಿಗೆ ಉತ್ತರ ನೀಡುತ್ತಾ ಕೂರಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಮೂಲ ಹಾಗೂ ವಲಸಿಗ ಎಂಬ ಪ್ರಶ್ನೆಯೇ ಇಲ್ಲ.ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷದವರು ಅಷ್ಟೇ. ಹೀಗಾಗಿ ಬೇರೆ ಮಾತನಾಡುವ ಅಗತ್ಯವಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ