ಮೆಲ್ಬೋರ್ನ್: ಮಾನವನ ನಾಗರೀಕತೆಯ ಯುಗಾಂತ್ಯ ಸನ್ನಿಹಿತವಾಗಿದೆ ಎಂಬ ಆತಂಕಕಾರಿ ವಿದ್ಯಮಾನದ ಬೆನ್ನಲ್ಲೇ ಇನ್ನು 31 ವರ್ಷಗಳಲ್ಲಿ ಅಂದರೆ 2050ರ ವೇಳೆಗೆ ಮನುಕುಲದ ಅವನತಿಯಾಗಲಿದೆ ಎಂಬ ಆಘಾತಕಾರಿ ವಿಷಯವನ್ನು ಹೊಸ ಸಂಶೋಧನಾ ವರದಿಯೊಂದು ಬಹಿರಂಗಗೊಳಿಸಿದೆ.
ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ವಾತಾವರಣ ಬದಲಾವಣೆಯ ಸಂಕಷ್ಟ, ನೈಸರ್ಗಿಕ ದುರಂತರಗಳ ಸರಮಾಲೆ ಇವುಗಳಿಂದ ಭೂಮಂಡಲ ಈಗಾಗಲೇ ಅವನತಿಯ ಅಂಚಿನತ್ತ ಸಾಗುತ್ತಿದೆ. ಈ ಎಲ್ಲ ವಿದ್ಯಮಾನಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡರೆ ಮನುಕುಲದ ನಾಗರಿಕತೆ ಯುಗ 2050ರ ವೇಳೆಗೆ ಕೊನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ರಿಪೋಟ್ರ್ಸ್ ಹೆಸರಿನ ಈ ಹೊಸ ವರದಿಯನ್ನು ಮೆಲ್ಬೋರ್ನ್ ಮೂಲದ ಬ್ರೇಕ್ಥ್ರೂ ನ್ಯಾಷನಲ್ ಸೆಂಟಲ್ ಫಾರ್ ಕ್ಲೈಮ್ಯಾಟಿಕ್ ರೆಸ್ಟೊರೇಷನ್ ಎಂಬ ಚಿಂತಕರ ಚಾವಡಿ ಸಿದ್ಧಪಡಿಸಿದೆ.
ಆಸ್ಟ್ರೇಲಿಯಾ ರಕ್ಷಣಾ ಪಡೆಗಳ ಮಾಜಿ ಮುಖ್ಯಸ್ಥ ಮತ್ತು ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ನಿವೃತ್ತ ಅಡ್ಮಿರಲ್ ಕ್ರಿಸ್ಬ್ಯಾರಿ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇದರಲ್ಲಿನ ಕೆಲವು ಅಂಶಗಳು ಆಘಾತಕಾರಿಯಾಗಿವೆ.
ನಮ್ಮ ಭೂ ಮಂಡಲದ ಮೇಲೆ ವ್ಯಾಪಕ ಒತ್ತಡ ಹೆಚ್ಚಾಗುತ್ತಿದೆ. ಇದು ಆತಂಕಕಾರಿ ಮಟ್ಟದಲ್ಲೇ ಮುಂದುವರಿದಿದೆ. ಮಾನವನ ಸ್ವಯಂಕೃತ ಅಪರಾಧಗಳಿಂದಾಗಿ ಪ್ರಕೃತಿ ಮೇಲೆ ಭಾರೀ ಒತ್ತಡ ಬೀಳುತ್ತಿದ್ದು, ಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದೆ. ಮಾನವ ನಿರ್ಮಿತ ದುರಂತಗಳಿಂದ ಇವು ಆತನ ಮೇಲೆ ದುಷ್ಪರಿಣಾಮ ಬೀರುವುದರ ಜತೆಗೆ ಪ್ರಕೃತಿ ಮತ್ತು ಜೀವ ಸಂಕುಲಗಳ ಮೇಲೆ ಅಗಾಧ ಪ್ರಭಾವ ಬೀರುತ್ತಿವೆ. ಇವೆಲ್ಲವುಗಳ ಒಟ್ಟಾರೆ ಫಲಿತಾಂಶವೇ ಭೂಮಂಡಲದ ಅವನತಿ.
ಅಂದರೆ ಮನುಕುಲದ ಅಂತ್ಯ ಎಂದು ವರದಿಯ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಪರಿಸರ ಮಾಲಿನ್ಯವು ವಾತಾವರಣ ಬದಲಾವಣೆಯ ಅಪಾಯಗಳಿಗೆ ತನ್ನ ಗರಿಷ್ಠ ಕೊಡುಗೆ ನೀಡುತ್ತಿದೆ. ಇದು ವರ್ಷಗಳು ಉರುಳಿದಂತೆ ಹಂತ ಹಂತವಾಗಿ ತನ್ನ ಅಗಾಧ ಗಂಡಾಂತರಗಳನ್ನು ಪ್ರಕೃತಿ ವಿನಾಶ ರೂಪದಲ್ಲಿ ತೋರ್ಪಡಿಸುತ್ತದೆ. ಇದು ಮನುಕುಲ ಮತ್ತು ಜೀವಸಂಕುಲದ ಮೇಲೆ ಭಾರೀ ದುಷ್ಪರಿಣಾಮ ಬೀರಿ ವಸುಂಧರೆಯ ಅವಧಿ ಕೊನೆಗೊಳ್ಳುವಂತೆ ಮಾಡುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಮಾನವ ಪ್ರಕೃತಿ ಮೇಲೆ ನಿರಂತರವಾಗಿ ನಡೆಸುತ್ತಿರುವ ದೌರ್ಜನ್ಯಗಳ ಪ್ರಭಾವವೇ ಈಗ ವಿಶ್ವದ ವಿವಿಧೆಡೆ ನೀರು ಮತ್ತು ಆಹಾರಕ್ಕಾಗಿ ಹಾಹಾಕಾರ ಎದ್ದಿದೆ.
ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಪ್ರಕೃತಿ ಮತ್ತು ಮಾನವನ ಸಂಘರ್ಷದಿಂದ ಅದು ಇಳೆ ಮೇಲೆ ಗಾಢ ಪ್ರಭಾವ ಬೀರಲಿದೆ. ಮುಂದಿನ ಮೂರು ದಶಕಗಳಲ್ಲಿ ವಾತಾವರಣದಲ್ಲಿ ಭಾರೀ ಏರುಪೇರು ಉಂಟಾಗಲಿದ್ದು, ಮನುಕುಲ ಅಪಾಯದ ಅಂಚಿನತ್ತ ಸರಿಯಲಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಪ್ಲಾಸ್ಟಿಕ್, ಹಸಿರುಮನೆ ಅನಿಲ ಹಾಗೂ ಕೈಗಾರಿಕೆಗಳ ತ್ಯಾಜ್ಯ ಮತ್ತು ಪ್ರದೂಷಣಗಳು ವಾತಾವರಣ ಕಲುಷಿತಗೊಳ್ಳಲು ತನ್ನ ಪಾಲನ್ನು ನೀಡುತ್ತಿದೆ. 2030ರ ವೇಳೆಗೆ ಜಾಗತಿಕ ಮಾಲಿನ್ಯಮಟ್ಟ ಈಗಿರುವ ಪ್ರಮಾಣಕ್ಕಿಂತಲೂ ಎರಡರಷ್ಟು ಏರಿಕೆಯಾಗಲಿದೆ ಎಂದು ವರದಿಯಲ್ಲಿ ಅಂಕಿ-ಅಂಶ ಸಹಿತ ವಿವರಿಸಲಾಗಿದೆ.
ಅಂಟಾರ್ಟಿಕ್ ಮತ್ತು ಆರ್ಕಿಟಿಕ್ಟ್ ಧೃವ ಪ್ರದೇಶಗಳಲ್ಲಿ ವಾತಾವರಣ ವೈಪರೀತ್ಯಗಳಿಂದಾಗಿ ಬೃಹತ್ ನೀರ್ಗಲ್ಲುಗಳು ಕರಗುತ್ತಿವೆ. ಇದರಿಂದ ಆ ಪ್ರದೇಶಗಳ ಭೌಗೋಳಿಕ ಗುಣಲಕ್ಷಣಗಳೇ ಬದಲಾಗುತ್ತಿವೆ. ಇನ್ನೊಂದೆಡೆ ಸಹರಾದಂತಹ ಮರುಭೂಮಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇವೆಲ್ಲವೂ ವಾತಾವರಣ ಬದಲಾವಣೆಯ ಅಪಾಯದ ಮುನ್ಸೂಚನೆಗಳಾಗಿವೆ ಎಂದು ತಿಳಿಸಲಾಗಿದೆ.
ವಿಶ್ವದ ಬಹುತೇಕ ದೇಶಗಳಲ್ಲಿ ಮಳೆಯ ಪ್ರಮಾಣದಲ್ಲಿ ಅರ್ಧದಷ್ಟು ಕುಂಠಿತವಾಗಿದ್ದರೆ, ಇನ್ನೊಂದೆಡೆ ತಾಪಮಾನದಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಹವಾಮಾನದ ವೈಪರೀತ್ಯಗಳ ದುಷ್ಪರಿಣಾಮಗಳು ಆಗಾಗ ದುರಂತಗಳ ರೂಪದಲ್ಲಿ ತನ್ನ ಭವಿಷ್ಯದ ಗಂಡಾಂತರವನ್ನು ಮುನ್ಸೂಚನೆ ರೂಪದಲ್ಲಿ ತಿಳಿಸುತ್ತದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಮಾನವ ಈಗಿನಿಂದಲೇ ಎಚ್ಚೆತ್ತುಕೊಂಡು ಪ್ರಕೃತಿ ಮತ್ತು ಪರಿಸರ ರಕ್ಷಣೆಗೆ ಗಂಭೀರ ಕ್ರಮಗಳನ್ನು ಕೈಗೊಂಡರೆ ಈ ಅವನತಿಯ ಅವಧಿಯನ್ನು ಸ್ವಲ್ಪ ಮಟ್ಟಿಗೆ ಮುಂದೂಡಬಹುದಾಗಿದೆ ಎಂದು ಸಲಹೆ ಮಾಡಲಾಗಿದೆ.