ಕೇಂದ್ರದಲ್ಲಿ ದಲಿತರನ್ನು ಸಚಿವರನ್ನಾಗಿ ಮಾಡುತ್ತೇವೆ-ತಾಕತ್ತಿದ್ದರೆ ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿ-ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜೂ.5-ಕೇಂದ್ರದಲ್ಲಿ ನಾವು ದಲಿತರನ್ನು ಸಚಿವರನ್ನಾಗಿ ಮಾಡಿಯೇ ಮಾಡುತ್ತೇವೆ ತಾಕ್‍ತ್ತಿದ್ದರೆ ನೀವು ರಾಜ್ಯದಲ್ಲಿ ಅದೇ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ತೋರಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ಕೇಂದ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ವೇಳೆ ನಾನು ಮತ್ತು ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕೇಂದ್ರದಲ್ಲಿ ದಲಿತ ಸಮುದಾಯದವರೊಬ್ಬರನ್ನು ಸಚಿವರನ್ನಾಗಿ ಮಾಡುವಂತೆ ಕೇಳಿಕೊಂಡಿದ್ದೆವು. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು.

ಅರಮನೆ ಮೈದಾನದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸಚಿವರು ಮತ್ತು ನೂತನ ಸಂಸದರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಕೇಂದ್ರದಲ್ಲಿ ದಲಿತರನ್ನು ಮಂತ್ರಿ ಮಾಡುತ್ತೇವೆ. ನೀವು ದಲಿತರನ್ನು ಮುಖ್ಯಮಂತ್ರಿ ಮಾಡುತ್ತೀರಾ ಎಂದು ಸಿದ್ದರಾಮಯ್ಯ ಅವರನ್ನ ಪರೋಕ್ಷವಾಗಿ ಪ್ರಶ್ನಿಸಿದರು.

ಮಹಾನ್ ನಾಯಕರೊಬ್ಬರು ಬಿಜೆಪಿಯವರು ದಲಿತ ವಿರೋಧಿಗಳೆಂದು ಆರೋಪ ಮಾಡುತ್ತಿದ್ದರು. ರಾಜ್ಯದ ಐದು ಪರಿಶಿಷ್ಟ ಜಾತಿ, ಎರಡು ಪರಿಶಿಷ್ಟ ವರ್ಗ ಕ್ಷೇತ್ರಗಳಲ್ಲಿ ನಾವೇ ಗೆದಿದ್ದೇವೆ. ಇಂತಹವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕೆ ಎಂದು ಪ್ರಶ್ನೆ ಮಾಡಿದರು.

ಯಾವುದೇ ಕಾರಣಕ್ಕೂ ಬಳ್ಳಾರಿಯಲ್ಲಿ ಜಿಂದಾಲ್ ಕಂಪೆನಿಗೆ 3667 ಎಕರೆ ಜಮೀನು ಕೊಡಲು ಅವಕಾಶ ನೀಡುವುದಿಲ್ಲ. ಪಕ್ಷದ ವತಿಯಿಂದ ಯಾವುದೇ ಹೋರಾಟಕ್ಕೂ ಸಿದ್ದ ಎಂದು ಘೋಷಿಸಿದರು.

ಕೇಂದ್ರ ಸಚಿವರಾದ ಸದಾನಂದಗೌಡ, ಸುರೇಶ್‍ಅಂಗಡಿ, ಪ್ರಹ್ಲಾದ್ ಜೋಷಿ ಮತ್ತಿತರರು ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಅವಕಾಶ ಕೊಡಬಾರದು. ಸಾಧ್ಯವಾದರೆ ಪ್ರಧಾನಿಯವರ ಗಮನಕ್ಕೂ ತರಬೇಕೆಂದು ಸಲಹೆ ಮಾಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಬಗ್ಗೆ ನಮ್ಮದೇನೂ ತಕರಾರಿಲ್ಲ. ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದಾಗ ಆ ಗ್ರಾಮಗಳಿಗೆ ಒಂದೊಂದು ಕೋಟಿ ವಿಶೇಷ ಅನುದಾನ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಈಗ ಗ್ರಾಮಗಳ ಪರಿಸ್ಥಿತಿ ಹೇಗಿದೆ ಎಂಬುದು ನಿಮಗೆ ಗೊತ್ತೆ ಎಂದು ಪ್ರಶ್ನಿಸಿದರು.

ಮೊದಲು ಇಂತಹ ರಾಜಕೀಯ ದೊಂಬರಾಟ ನಿಲ್ಲಿಸಿ, ಬರಪೀಡಿತ ಪ್ರದೇಶಗಳಿಗೆ ಕೂಡಲೇ ಭೇಟಿ ಕೊಡಿ, ಲೋಕಸಭೆ ಚುನಾವಣೆಯಲ್ಲಿ ಉಂಟಾದ ಸೋಲನ್ನು ಮರೆಯಲು ನಾಟಕವಾಡುತ್ತಿದ್ದಾರೆ. ಒಂದು ವರ್ಷದಿಂದ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ನೆಲೆಸಿದ್ದವರಿಗೆ ಆಗ ಜನರ ನೆನಪಿರಲಿಲ್ಲವೇ ಎಂದು ಬಿಎಸ್‍ವೈ ಪ್ರಶ್ನಿಸಿದರು.

ರಾಜ್ಯ ಉಸ್ತುವಾರಿ ಮುರುಳೀಧರರಾವ್ ಮಾತನಾಡಿ, ಕರ್ನಾಟಕದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಬರಬಹುದು. ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು. ಲೋಕಸಭೆ ಚುನಾವಣೆಯಲ್ಲಿ ಗೆದ್ದಂತೆ ಅಭೂತ ಪೂರ್ವ ಗೆಲುವು ಸಾಧಿಸಲು ಇಂದಿನಿಂದಲೇ ಸಜ್ಜಾಗಬೇಕೆಂದು ಕರೆ ನೀಡಿದರು.

ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಮತ್ತು ಮಹಾಘಟ್‍ಬಂಧನ್ ನಡುವೆ ನೇರ ಹಣಾಹಣಿ ನಡೆಯಿತು. ಮತದಾರರು ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿ 25ಕೋಟಿದ್ದಾರೆ. ಆಯ್ಕೆ ಮಾಡಿ ಶೇ.50ರಷ್ಟು ಮತ ಕೊಟ್ಟಿದ್ದಾರೆ. ಎಲ್ಲಿ ಹೋಯಿತು ನಿಮ್ಮ ಮಹಾ ಮೈತ್ರಿ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದ ಜತೆ ಸಂಘರ್ಷಕ್ಕಿಳಿಯುವುದಿಲ್ಲ. ನೀವು ಸಕಾರಾತ್ಮಕವಾಗಿ ಇದ್ದರೆ ನಾವು ಕೂಡಾ ಸಕಾರಾತ್ಮಕವಾಗಿಯೇ ಇರುತ್ತೇವೆ ಎಂದು ಹೇಳಿದರು.

ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಪ್ರತಿ ತಿಂಗಳಿಗೊಮ್ಮೆ ಸಭೆ ಸೇರುತ್ತೇವೆ. ಇದಕ್ಕಾಗಿ ದೆಹಲಿಯ ನನ್ನ ಕಚೇರಿಯಲ್ಲೇ ಪ್ರತ್ಯೇಕ ಕೊಠಡಿಯನ್ನು ಮೀಸಲಿಡುತ್ತೇವೆ. ಒಬ್ಬ ಅಧಿಕಾರಿಯನ್ನೂ ಸಹಾ ನೇಮಕ ಮಾಡಲಾಗುವುದು. ಅಭಿವೃದ್ಧಿ ವಿಷಯದಲ್ಲಿ ನಮಗೆ ರಾಜಕಾರಣ ಬೇಡ. ಕೇಂದ್ರದ ಯೋಜನೆಗಳನ್ನು ರಾಜ್ಯಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಡಿವಿಎಸ್ ವಾಗ್ದಾನ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ