ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವೆನಿಸಿರುವ ರಾಮಲಿಂಗಾ ರೆಡ್ಡಿ ಅವರು ಪಕ್ಷ ಬಿಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ನಲ್ಲಿರುವ ಹುಳುಕುಗಳ ಬಗ್ಗೆ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಕೈ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪ ಅವರದ್ದು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. ಇದಕ್ಕೆ ಕಾರಣವೇನು ಎಂಬುದನ್ನು ಅವರು ಬರೆದುಕೊಂಡಿದ್ದಾರೆ. “ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರ ಕಡೆಗಣನೆ ಮಾಡಲಾಗಿದೆ ಹಾಗೂ ಕೆಲವು ಕಾಂಗ್ರೆಸ್ ಸಚಿವರಲ್ಲಿ ಸಂಘಟನಾ ದೂರದೃಷ್ಟಿತ್ವದ ಕೊರತೆ ಇದೆ. ಹಾಗಾಗಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು. ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ಇರುವುದು, ಕೆಲವು ಸಚಿವರ ಕಾರ್ಯಕ್ಷಮತೆಯೂ ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣ,” ಎನ್ನುವ ಆರೋಪ ರಾಮಲಿಂಗಾರೆಡ್ಡಿಯದ್ದು.
ಕಾಂಗ್ರೆಸ್ಗೆ ಹೀನಾಯ ಸ್ಥಿತಿ ಬರಲು ಕಾರಣವೇನು ಎಂಬುದನ್ನು ವಿವರಿಸಿರುವ ಅವರು, “ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಪಕ್ಷದ ಕುರಿತು ಏನೂ ಅರಿವಿಲ್ಲದೇ ಬಂದ ಹೊಸಬರಿಗೆ,ವಲಸಿಗರಿಗೆ ಮಣೆ ಹಾಕಲಾಗುತ್ತಿದೆ. ಇಂದಿನ ಈ ಪರಿಸ್ಥಿತಿಗೆ ಆ ನಿರ್ಧಾರವೇ ಕಾರಣ. ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ. ನಮ್ಮ ಸರ್ಕಾರವಿದ್ದೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಉತ್ಸಾಹ ಕಳೆದುಕೊಂಡಿದ್ದರು.
ಪ್ರಮುಖ ಸ್ಥಾನದಲ್ಲಿರುವ ಕೆಲವು ಕಾಂಗ್ರೆಸ್ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಯಾವುದೇ ಉತ್ತಮ ಭಾಂಧವ್ಯ, ಸಂವಹನ ಇದ್ದಿರಲಿಲ್ಲ. ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ನಿರ್ಲಕ್ಷ್ಯ ಮಾಡಲಾಗಿತ್ತು,” ಎಂದಿದ್ದಾರೆ.
ಪಕ್ಷ ಉಳಿಸಲು ಮುಂದೇನು ಮಾಡಬೇಕು ಎಂಬುದಕ್ಕೆ ರಾಮಲಿಂಗಾ ರೆಡ್ಡಿ ಕೆಲ ಸಲಹೆ ನೀಡಿದ್ದಾರೆ. “ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಸವಾಲಿನ ದಿನಗಳನ್ನು ಎದುರಿಸಲು, ಪಕ್ಷ ಹಾಗೂ ಸರ್ಕಾರದಲ್ಲಿ ಹಿರಿಯರ ಕಡೆಗಣನೆ ಸರಿದೂಗಿಸಬೇಕಾಗಿದೆ. ಸರ್ಕಾರದಲ್ಲಿ ಹಿರಿಯರಿಗೆ ಪ್ರಾತಿನಿಧ್ಯ ನೀಡುವಂತಾಗಲು ಕಾಂಗ್ರೆಸ್ ಪಕ್ಷದ ಹಿರಿಯರೆಲ್ಲರೂ ಒಂದೆಡೆ ಸೇರಿ ಪಕ್ಷದ ಹಿತ ಸಮಾಲೋಚಿಸಬೇಕಾಗಿದೆ. ಜೊತೆಗೆ ಹಿರಿಯರು ಯಾರೂ ಪಕ್ಷ ಬಿಡದಂತೆ ಎಚ್ಚರಿಕೆವಹಿಸಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹಿರಿಯ ನಾಯಕರು ಪಕ್ಷದಲ್ಲಿ ಮುಂದುವರೆಯುವುದು ಕಷ್ಟ,” ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ.