ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.3-ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ಟ್ವಿಟ್ ಮಾಡಿರುವ ಅವರು, ಕನ್ನಡ ನಮ್ಮ ಅಸ್ಮಿತೆ.ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನಪ್ರತಿನಿಧಿಗಳೆಲ್ಲರೂ ಈ ಬಗ್ಗೆ ಪಕ್ಷಾತೀತವಾಗಿ ಚಿಂತನೆ ಮಾಡಬೇಕೆಂದು ಮನವಿ ಮಾಡುವುದಾಗಿ ಹೇಳಿದ್ದಾರೆ.

ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೇ ಹೊರತು, ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಿಂದಾಗಿ ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆ ಮತ್ತು ಸಂಸ್ಕøತಿಗೆ ಹೆಚ್ಚು ಒತ್ತು ನೀಡಬೇಕು. ಹೊಸ ಶಿಕ್ಷಣ ನೀತಿ ಮೂಲಕ ಹಿಂದಿ ಹೇರಿಕೆ ಮಾಡುತ್ತಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಒಂದು ವೇಳೆ ಬಲವಂತವಾಗಿ ಹಿಂದಿ ಹೇರಿದರೆ ನಮ್ಮ ಅಸ್ಮಿತೆಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದಂತಾಗುತ್ತದೆ.

ಏಕಪಕ್ಷೀಯ ನಿರ್ಧಾರ ವೈವಿಧ್ಯತೆಯಲ್ಲಿ ಏಕತೆಯ ಸಂಪ್ರದಾಯಗಳಿಗೆ ವಿರುದ್ಧವಾದುದು. ಕನ್ನಡಿಗರಿಗೆ ಭಾಷಾ ಕಲಿಕೆ ಸ್ವಂತ ಆಯ್ಕೆಯಾಗಿರಬೇಕೇ ಹೊರತು ಬಲವಂತವಾದ ಹೇರಿಕೆಯಾಗಿರಬಾರದು ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿಭಾಷಾ ಶಿಕ್ಷಣ ನೀತಿ ಜಾರಿಗೆ ಕೇಂದ್ರ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿ ನಾವೇನಾದರೂ ಹಿಂದಿ ಭಾಷೆ ಬೇಕೆಂದು ಕೇಳಿದ್ದೇವೆಯೇ, ಕೇಮದ್ರ ಇಂಥದ್ದೊಂದು ನೀತಿ ರೂಪಿಸಿರುವುದು ಬಲವಂತ ಹೇರಿಕೆ ಎಂದರು.

ನೆಲ, ಜಲ, ಭಾಷೆ ವಿಚಾರದಲ್ಲಿ ರಾಜೀ ಇಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾದರೆ ನಾವು ತಮಿಳುನಾಡು ಮಾದರಿ ಹೋರಾಟ ಮಾಡಲು ಸಿದ್ಧ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ