ಬೆಂಗಳೂರು, ಜೂ.2- ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಎಂಬ ಗಾದೆ ಮಾತು ಈಗ ಯಾವ ಶೂನಲ್ಲಿ ಏನಿರುತ್ತದೆಯೋ ಎಂಬಂತಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನಲ್ಲಿ ಕೊಚ್ಚಿಕೊಂಡು ಬರುವ ಹಾವುಗಳು ಮನೆಯ ಬಳಿಯೋ ಅಥವಾ ಚಪ್ಪಲಿ ಬಿಡುವ ಸ್ಥಳದಲ್ಲೋ ಆಶ್ರಯಪಡುತ್ತಿವೆ.
ಇಂತಹದೇ ಘಟನೆ ಸಿಲಿಕಾನ್ ಸಿಟಿಯ ವಿದ್ಯಾರಣ್ಯಪುರ ಹಾಗೂ ದೊಮ್ಮಲೂರಿನಲ್ಲಿ ನಡೆದಿದೆ.
ಶೂನಲ್ಲಿ ಮಿಡಿ ನಾಗರ:
ವಿದ್ಯಾರಣ್ಯಪುರದ ಮನೆಯೊಂದರಲ್ಲಿ ಶೂನೊಳಗೆ ಹಾವಿನ ಮರಿ ಪ್ರತ್ಯಕ್ಷಗೊಂಡಿದೆ. ಪಾದರಕ್ಷೆಗಳನ್ನು ಬಿಟ್ಟಿರುವ ಸ್ಥಳದಲ್ಲಿ ಏನೋ ಸಪ್ಪಳವಾಗುತ್ತಿದೆ ಎಂದು ಮನೆಯವರು ಬಂದು ನೋಡಿದಾಗ ಚಪ್ಪಲಿ ರಾಶಿಯಲ್ಲಿ ಶೂ ಒಳಗೆ ಮರಿ ಹಾವೊಂದು ಕಂಡುಬಂದಿದೆ, ಕೂಡಲೇ ಮನೆಯವರು ಗಾಬರಿಗೊಂಡು ಉರಗ ತಜ್ಞ ರಾಜೇಶ್ ಅವರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ರಾಜೇಶ್ ಶೂನಲ್ಲಿದ್ದ ಹಾವಿನ ಮರಿಯನ್ನು ರಕ್ಷಿಸಿದ್ದಾನೆ.
ಮನೆಯ ಬಳಿ ಹಾವಿನ ಮರಿ:
ವಿದ್ಯಾಪುರದಲ್ಲಿ ಶೂ ಒಳಗೆ ಮಿಡಿ ನಾಗರ ಪ್ರತ್ಯಕ್ಷಗೊಂಡಿದ್ದರೆ ದೊಮ್ಮಲೂರಿನಲ್ಲೂ ಮನೆಯ ಮುಂಭಾಗ ನಾಗರಹಾವಿನ ಮರಿ ಕಂಡು ಬಂದಿದ್ದರಿಂದ ಮನೆಯವರು ಗಾಬರಿಗೊಂಡಿದ್ದಾರೆ.
ಇಂದು ಬೆಳಗ್ಗೆ ಮನೆಯವರು ಬಾಗಿಲನ್ನು ತೆರೆಯುತ್ತಿದ್ದಂತೆ ಮಿನಿ ನಾಗರವನ್ನು ಕಂಡು ಬೆಚ್ಚಿಬಿದ್ದು ತಕ್ಷಣ ಉರಗ ತಜ್ಞ ಜಯರಾಜ್ಗೆ ದೂರವಾಣಿ ಕರೆ ಮಾಡಿದ್ದಾರೆ.
ಜಯರಾಜ್ ಸ್ಥಳಕ್ಕೆ ಆಗಮಿಸಿ ಹಾವನ್ನು ಸೆರೆಹಿಡಿಯುವ ಮೂಲಕ ಮನೆಯವರ ಆತಂಕವನ್ನು ದೂರ ಮಾಡಿದ್ದಾರೆ.