ಮತ್ತೆ ಗ್ರಾಮ ವಾಸ್ತವ್ಯದ ಮೊರೆ ಹೋಗುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜೂ.2-ಗ್ರಾಮ ವಾಸ್ತವ್ಯದ ಮೂಲಕ ಈ ಮೊದಲು ಜನಪ್ರಿಯತೆ ಗಳಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಅದೇ ಮಾದರಿಯ ಆಡಳಿತ ಶೈಲಿಯತ್ತ ಒಲವು ತೋರಿದ್ದು, ಈ ಬಾರಿ ಹೋಬಳಿ ಅಥವಾ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಹಿನ್ನಡೆಯಾದ ನಂತರ ಪಕ್ಷ ಸಂಘಟನೆ ಮತ್ತು ಸರ್ಕಾರದ ಕಾರ್ಯವೈಖರಿಯ ಪರಾಮರ್ಶೆಗೆ ಉಭಯ ಪಕ್ಷಗಳ ಮುಖಂಡರು ಮುಂದಾಗಿದ್ದಾರೆ.

ಕುಮಾರಸ್ವಾಮಿಯವರು 2006ರಿಂದ 20 ತಿಂಗಳ ಕಾಲ ಬಿಜೆಪಿ ಜೊತೆ ನಡೆಸಿದ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮ ವಾಸ್ತವ್ಯ, ಜನತಾದರ್ಶನ, ಲಾಟರಿ, ಸಾರಾಯಿ ನಿಷೇಧದಂತಹ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರೈತರ 43 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರೂ ಅದು ಲೋಕಸಭೆ ಚುನಾವಣೆಯಲ್ಲಿ ಕೈ ಹಿಡಿಯಲಿಲ್ಲ.

ಸಂಪುಟದಲ್ಲಿ ಇತರ ಸಚಿವರು ಕುಮಾರಸ್ವಾಮಿಯವರ ವೇಗಕ್ಕೆ ತಕ್ಕಂತೆ ಕೆಲಸ ಮಾಡದೆ ಇರುವುದರಿಂದ ಸರ್ಕಾರ ಟೇಕಾಫ್ ಆಗಿದೆ ಎಂಬ ಭಾವನೆಯೇ ಜನರಲ್ಲಿ ಮೂಡುತ್ತಿಲ್ಲ. ಹೀಗಾಗಿ ಮತ್ತೆ ಕುಮಾರಸ್ವಾಮಿ ತಮ್ಮ ಹಳೇ ಕಾರ್ಯವೈಖರಿಗೆ ಮರಳಿದ್ದಾರೆ. ಈ ಬಾರಿ ಜನರನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಮತ್ತೆ ಗ್ರಾಮ ವಾಸ್ತವ್ಯದ ಮೊರೆ ಹೋಗುತ್ತಿದ್ದಾರೆ.

ಆದರೆ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆಗಳಿವೆ. ಈ ಹಿಂದಿನಂತೆ ಗ್ರಾಮಗಳಲ್ಲಿ ವಾಸ್ತವ್ಯ ಹೂಡುವ ಬದಲಾಗಿ ಹೋಬಳಿ ಮಟ್ಟದಲ್ಲಿ ಅಥವಾ ಪಂಚಾಯ್ತಿ ಮಟ್ಟದಲ್ಲಿ ಬೆಳಗ್ಗೆ 9 ರಿಂದ ತಡರಾತ್ರಿವರೆಗೆ ಜನತಾದರ್ಶನ ನಡೆಸಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಆಡಳಿತವೇ ಗ್ರಾಮಗಳಲ್ಲಿ ನೆಲೆಯೂರಲಿದೆ.

ಆಯಾ ಹೋಬಳಿ ಅಥವಾ ಗ್ರಾಮ ಪಂಚಾಯ್ತಿಮಟ್ಟದಲ್ಲಿನ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸುವುದು ಈ ವಾಸ್ತವ್ಯದ ಉದ್ದೇಶ. ಈ ಮೊದಲಿನಂತೆ ಅರ್ಜಿ ಪಡೆದು ಜನರನ್ನು ಬರಿಗೈಲಿ ಕಳಿಸದೆ, ಸ್ಥಳದಲ್ಲೇ ಪರಿಹಾರ ಒದಗಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಜೊತೆಯಲ್ಲೇ ಕರೆದುಕೊಂಡು ಹೋಗಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.

ಗ್ರಾಮ ವಾಸ್ತವ್ಯದಲ್ಲಿ ಹಳ್ಳಿಗಳ ಜನಸಾಮಾನ್ಯರ ಮನೆಗಳಲ್ಲಿ ಕುಮಾರಸ್ವಾಮಿ ಮಲಗುತ್ತಿದ್ದರು. ಆದರೆ ಈ ಬಾರಿ ಆಯಾ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ತಂಗಲಿದ್ದಾರೆ.ಇದರಿಂದ ಶಾಲೆಗಳ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗುವ ನಿರೀಕ್ಷೆಗಳಿವೆ.

ಪ್ರತಿ ತಿಂಗಳು ನಾಲ್ಕು ಬಾರಿ ಅಂದರೆ ವಾರಕ್ಕೊಮ್ಮೆ ಹೋಬಳಿ ಅಥವಾ ಪಂಚಾಯ್ತಿ ಮಟ್ಟದಲ್ಲಿ ವಾಸ್ತವ್ಯ ಮತ್ತು ಜನತಾ ದರ್ಶನ ನಡೆಸುವುದು ಮುಖ್ಯಮಂತ್ರಿಯವರ ಉದ್ದೇಶ ಎಂದು ಹೇಳಲಾಗಿದೆ.

ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಜನ ದೊರೆಯನ್ನು ಭೇಟಿ ಮಾಡಿ ಅಳಲು ತೋಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಆಗಮಿಸುತ್ತಿದ್ದರಿಂದ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಲು ಸಾಧ್ಯವಾಗುತ್ತಿರಲಿಲ್ಲ. ಹೋಬಳಿ ಅಥವಾ ಪಂಚಾಯ್ತಿ ಮಟ್ಟದಲ್ಲೇ ಜನತಾದರ್ಶನ ಮತ್ತು ವಾಸ್ತವ್ಯ ನಡೆಸುವುದರಿಂದ ಆಯಾ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸುಲಭವಾಗುವುದಲ್ಲದೆ, ದೂರದ ಊರುಗಳಿಂದ ಜನ ಆಡಳಿತದ ಶಕ್ತಿಕೇಂದ್ರಕ್ಕೆ ಬರುವ ಪರದಾಟವೂ ತಪ್ಪಲಿದೆ.

ಪಂಚಾಯ್ತಿ ಮಟ್ಟಕ್ಕೆ ಸರ್ಕಾರವನ್ನು ತೆಗೆದುಕೊಂಡು ಹೋಗುವುದರಿಂದ ಆಯಾ ಭಾಗದಲ್ಲಿ ಸ್ಥಳೀಯವಾಗಿ ಕಾಡುವ ಮೂಲಭೂತ ಸಮಸ್ಯೆಗಳು, ಆಡಳಿತಕ್ಕೆ ಮನವರಿಕೆಯಾಗಿ ಪರಿಹಾರ ದೊರಕುವ ಸಾಧ್ಯತೆ ಇದೆ.

ಒಂದೆಡೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿತ್ತು.ಆದರೆ ಆಪರೇಷನ್ ಕಮಲಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ. ಹೀಗಾಗಿ ಕುಮಾರಸ್ವಾಮಿ ಕೊಂಚ ನಿರಾಳವಾಗಿದ್ದಾರೆ. ಸರ್ಕಾರ ಅಸ್ಥಿರತೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆಡಳಿತ ಯಂತ್ರ ಚುರುಕುಗೊಳಿಸಿ ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಈ ಹಿಂದಿನಂತೆ ಜನಪ್ರಿಯ ಮುಖ್ಯಮಂತ್ರಿ ಎಂಬ ವರ್ಚಸ್ಸು ಬೆಳೆಸಿಕೊಳ್ಳಲು ಕಾರ್ಯತಂತ್ರ ರೂಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ