ಬೆಂಗಳೂರು, ಮೇ 30- ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಳಿ ಬಂದ ಸಮಸ್ಯೆಗಳು ಹಾಗೂ ಸಂಪುಟ ಪುನಾರಚನೆ ಕುರಿತಂತೆ ಚರ್ಚಿಸಲು ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಗಂಭೀರ ಸಮಾಲೋಚನೆ ನಡೆದಿದೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಸದಾಶಿವನಗರದಲ್ಲಿರುವ ಬಿಡಿಎ ಕ್ವಾಟರ್ಸ್ನ ಮನೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರಿಗೆ ಉಪಹಾರ ಕೂಟ ಆಯೋಜನೆ ಮಾಡಲಾಗಿತ್ತು.
ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಜಯಮಾಲಾ, ಯು.ಟಿ.ಖಾದರ್, ಇ.ತುಕಾರಾಂ, ಎಂ.ಟಿ.ಬಿ.ನಾಗರಾಜ್, ಶಿವಶಂಕರರೆಡ್ಡಿ, ಜಮೀರ್ ಅಹಮ್ಮದ್ ಖಾನ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಮತ್ತಿರರರು ಉಪಹಾರ ಕೂಟದಲ್ಲಿ ಭಾಗವಹಿಸಿದ್ದರು.
ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ನಿನ್ನೆಯಿಂದ ಸಭೆಗಳ ಮೇಲೆ ಸಭೆಗಳನ್ನು ನಡೆಸಿ ಅತೃಪ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ನಿನ್ನೆ ಬೆಳಗ್ಗೆ ಕುಮಾರಕೃಪ ಅತಿಥಿಗೃಹದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ವೇಣುಗೋಪಾಲ್, ದಿನೇಶ್ಗುಂಡೂರಾವ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಪರಮೇಶ್ವರ್ ಮತ್ತಿತರರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿದ್ದರು.
ನಂತರ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪ್ರತಿಯೊಬ್ಬ ಶಾಸಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ನಿನ್ನೆಯ ಶಾಸಕಾಂಗ ಸಭೆಗೆ ಹಿರಿಯ ಶಾಸಕರಾದ ರೋಷನ್ಬೇಗ್, ರಮೇಶ್ ಜಾರಕಿಹೊಳಿ ಸೇರಿದಂತೆ ಸುಮಾರು 7 ಮಂದಿ ಗೈರು ಹಾಜರಾಗಿದ್ದರು. 79 ಶಾಸಕರ ಪೈಕಿ 72 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರದ ಸುಧಾಕರ್, ಕಂಪ್ಲಿಯ ಗಣೇಶ್, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಬಿ.ಸಿ.ಪಾಟೀಲ್ ಸೇರಿದಂತೆ ಬಹಳಷ್ಟು ಅತೃಪ್ತ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಚಿವರ ವೈಫಲ್ಯಗಳ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ಕೆಲವು ಶಾಸಕರಂತೂ ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಸಮರ್ಥರನ್ನು ಮೊದಲು ಕೈ ಬಿಟ್ಟು ಪಕ್ಷ ನಿಷ್ಠೆಗೆ ಮತ್ತು ಸಮರ್ಥರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯಗಳು ಸಭೆಯಲ್ಲಿ ಕೇಳಿ ಬಂದಿದ್ದವು.
ಇಲಾಖಾವಾರು ಸಚಿವರುಗಳು ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಆಡಳಿತ ಪಕ್ಷದ ನಾಯಕರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ. ಅಭಿವೃದ್ಧಿಯ ಹಣ ಬಿಡುಗಡೆಗೂ ತಾರತಮ್ಯ ನಡೆಯುತ್ತಿದೆ. ಕೆಲವು ಸಚಿವರನ್ನು ಭೇಟಿ ಮಾಡಬೇಕಾದರೆ ದಿನಗಟ್ಟಲೆ ಕಾಯಬೇಕಿದೆ.
ಸರ್ಕಾರದ ಬಗ್ಗೆ ಜನಸಾಮಾನ್ಯರಲ್ಲಿ ಒಳ್ಳೆಯ ಅಭಿಪ್ರಾಯಗಳಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪದೇ ಪದೇ ವಾಕ್ಸಮರಗಳು ನಡೆಯುತ್ತಿವೆ. ಹೀಗಿದ್ದ ಮೇಲೆ ನಾವು ಜನರಿಗೆ ಹೇಗೆ ಉತ್ತರ ನೀಡಬೇಕು. ಸರ್ಕಾರವನ್ನು ಸಮರ್ಥಿಸಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಶಾಸಕರು ಮುಂದಿಟ್ಟಿದ್ದಾರೆ.
ಕೆಲವು ಶಾಸಕರಂತೂ ಸಚಿವರ ವಿರುದ್ಧ ರೋಷಾವೇಶದ ವಾಗ್ದಾಳಿಗಳನ್ನು ನಡೆಸಿದ್ದಾರೆ. ಹೀಗಾಗಿ ಶಾಸಕರ ಸಮಸ್ಯೆಗಳನ್ನು ಸಚಿವರ ಜತೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಹಿಡಿಯಲು ಇಂದು ಉಪಹಾರ ಕೂಟದಲ್ಲಿ ಮಹತ್ವದ ಚರ್ಚೆಗಳನ್ನು ನಡೆಸಲಾಗಿದೆ.
ಅತೃಪ್ತರು ಸಮಾಧಾನಗೊಳ್ಳದೇ ಇದ್ದರೆ ಸಂಪುಟ ಪುನಾರಚಿಸಿ ಅತೃಪ್ತರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಒಂದು ವೇಳೆ ಸಂಪುಟ ಪುನಾರಚನೆಯಾಗಬೇಕಾದರೆ ಯಾರನ್ನು ಕೈ ಬಿಡಬೇಕು ಎಂಬ ಜಿಜ್ಞಾಸೆ ಕಾಂಗ್ರೆಸ್ ನಾಯಕರನ್ನು ಕಾಡಿದೆ.
ಸಂಪುಟದಿಂದ ಕೈ ಬಿಡಲಾದ ಸಚಿವರು ಬಂಡಾಯ ಏಳುವುದನ್ನು ತಪ್ಪಿಸಲು ಇಂದು ಉಪಹಾರ ಕೂಟದಲ್ಲಿ ಸಚಿವರ ಜತೆ ಚರ್ಚೆ ನಡೆಸಲಾಗಿದೆ. ಪಕ್ಷಕ್ಕಾಗಿ ತ್ಯಾಗ ಮಾಡುವುದ ಅನಿವಾರ್ಯವಾಗಿದೆ. ಯಾವುದೇ ಸಂದರ್ಭದಲ್ಲೂ ಬಂಡಾಯ ಚುಟವಟಿಕೆಗಳಿಗೆ ಅವಕಾಶ ಕಲ್ಪಿಸಬಾರದು, ಸಚಿವರು ತಾವಾಗಿಯೇ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದ ಮುಂದುವರಿಕೆಗೆ ಸಹಕರಿಸಬೇಕು ಎಂದು ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಆದರೆ, ಕೆಲ ಸಚಿವರು ಸಂಪುಟ ಪುನಾರಚನೆಗೆ ವಿರೋಧ ವ್ಯಕ್ತಪಡಿಸಿದ್ದು, ಸಂಪುಟ ವಿಸ್ತರಣೆ ಮಾಡಿ ಅತೃಪ್ತರಿಗೆ ಅವಕಾಶ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.