ಜಿಂದಾಲ್‍ಗೆ ಕಡಿಮೆ ದರದಲ್ಲಿ ಜಮೀನನ್ನು ನೀಡುತ್ತಿರುವುದು ಸರಿಯಿಲ್ಲ-ಎಚ್.ಕೆ.ಪಾಟೀಲ್

ಬೆಂಗಳೂರು, ಮೇ 30- ಜಿಂದಾಲ್ ಕಂಪೆನಿಗೆ ಜಮೀನು ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಕಾನೂನು ಇಲಾಖೆ ನೀಡಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ವಹಿಸುವಂತೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆದ ಪತ್ರದಲ್ಲಿ ಕಾನೂನು ಅಂಶಗಳನ್ನು ಪ್ರಸ್ತಾಪಿಸಿರುವ ಅವರು, ಜಿಂದಾಲ್ ಕಂಪೆನಿಗೆ 3666 ಎಕರೆ ಜಮೀನು ನೀಡುವ ವಿಚಾರದಲ್ಲಿ ಕಾನೂನು ಇಲಾಖೆಯ ವರದಿಯನ್ನು ಗಮನಕ್ಕೆ ತೆಗೆದುಕೊಳ್ಳಬೇಕಿದೆ. ಜಮೀನು ನೀಡುವವರಿಗೆ ಅಡ್ವೋಕೇಟ್ ಜನರಲ್ ನೀಡಿರುವ ವರದಿಯಿಂದ ತಪ್ಪುಗ್ರಹಿಕೆ ಉಂಟಾಗಿದೆ ಎಂದು ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ವಿಚಾರ ಇನ್ನೂ ಸುಪ್ರೀಂಕೋರ್ಟ್‍ನಲ್ಲಿ ಇತ್ಯರ್ಥವಾಗಬೇಕಿದೆ. ಸಮಾಜ ಪತಿವರ್ತನ ಸಮುದಾಯ ಸಲ್ಲಿಸಿರುವ ಅರ್ಜಿ ಸಹ ಸುಪ್ರೀಂಕೋರ್ಟ್‍ನಲ್ಲಿದೆ. ಅಲ್ಲದೆ ಜಿಂದಾಲ್ ಕಂಪೆನಿ ರಾಜ್ಯ ಸರ್ಕಾರಕ್ಕೆ 2ಸಾವಿರ ಕೋಟಿ ರೂ. ಬಾಕಿ ನೀಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಂದಾಲ್‍ಗೆ ಕಡಿಮೆ ದರದಲ್ಲಿ ಜಮೀನನ್ನು ನೀಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಹಿಂದಿನ ಸಚಿವ ಸಂಪುಟ ಕಡತಗಳನ್ನು ಮತ್ತೊಮ್ಮೆ ಪರಿಶೀಲಿಸಿ ಕಾನೂನು ಇಲಾಖೆಯ ವರದಿಯನ್ನೂ ಪರಿಗಣಿಸಿ ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ