ಬೆಂಗಳೂರು: ನಗರದ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಯೋಜಿಸಿರುವ ಮಾವು – ಹಲಸು ವೈವಿಧ್ಯಮ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೆಸರಘಟ್ಟದಲ್ಲಿರುವ ಸಂಸ್ಥೆಯ ಆವರಣದಲ್ಲೇ ಈ ಮೇಳ ಇಂದು ಮತ್ತು ನಾಳೆ ನಡೆಯುತ್ತಿದ್ದು, ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣುಗಳ ಬಗ್ಗೆ ವಿವಿಧ ಜಿಲ್ಲೆಗಳಿಂದ ಬಂದಿರುವ ರೈತರು ಮಾಹಿತಿ ಪಡೆಯುತ್ತಿದ್ದಾರೆ.
ಸಂಸ್ಥೆಯು ಸುಮಾರು 750ಕ್ಕೂ ಅಧಿಕ ಮಾವು ತಳಿಗಳನ್ನು ಪ್ರದರ್ಶನಕ್ಕಿಟ್ಟಿದೆ. ಅದರಲ್ಲಿ 180 ಬಗೆಯ ಅಪ್ಪೆ ಮಿಡಿ (ಉಪ್ಪಿನಕಾಯಿಗೆ ಬಳಸುವ ಕಾಯಿ) ಜಾತಿಗೆ ಸೇರಿವೆ. ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ 110 ಬಗೆಯ ಹಲಸಿನ ತಳಿಗಳನ್ನೂ ಇಲ್ಲಿ ಸಂರಕ್ಷಿಸಲಾಗಿದೆ. ಈ ಫಲ ವೈವಿಧ್ಯವನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಮೇಳದ ಉದ್ದೇಶವಾಗಿದ್ದು, ಮೇಳಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಜನರು ಬಂದು ಮಾವು ಮತ್ತು ಹಲಸಿನ ತಳಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.