ವಿಶ್ವಕಪ್ಗೆ ಆಯ್ಕೆಯಾದ ಆಟಗಾರರನ್ನ ಐಪಿಎಲ್ನಲ್ಲಿ ಆಡಿಸಬಾರದೆಂಬ ಕೂಗು ಜೋರಾಗಿತ್ತು. ಅಭಿಮಾನಿಗಳ ವಿರೋಧದ ನಡುವೆಯೂ ಆಟಗಾರರು ಐಪಿಎಲ್ ಆಡಿ ಬಳಲಿದ್ದರು. ಇನ್ನೂ ಐಪಿಎಲ್ನಲ್ಲಿ ಆಡಿ ದಣಿದಿದ್ದ ಟೀಮ್ ಇಂಡಿಯಾ ಆಟಗಾರರು ರಿಲ್ಯಾಕ್ಸ್ ಮೂಡ್ಗೆ ಮರಳಿದ್ದರು. ಒಂದೂವರೆ ತಿಂಗಳು ಐಪಿಎಲ್ ಆಡಿರೋ ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ಗೆ ಫಿಟ್ ಇದ್ದಾರಾ..? ಇಲ್ವಾ ಎಂಬ ಹಲವು ಅನುಮಾನಗಳು ಕಾಂಡಲಾರಂಭಿಸಿದ್ದವು. ಇದಕ್ಕೆಲ್ಲಾ ಈಗ ಉತ್ತರ ಸಿಗುವಕಾಲ ಸನ್ನಿಹಿತವಾಗಿದೆ.
ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಬೇಕೆಂಬ ಕೋಟ್ಯಂತರ ಭಾರತೀಯರ ಕನಸು ಹೊತ್ತು ವಿರಾಟ್ ಬಳಗ ಇಂಗ್ಲೆಂಡ್ಗೆ ತೆರಳಿದೆ. ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆಂಗ್ಲರ ನಾಡಿಗೆ ತೆರಳಿರುವ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದು ಭಾರತೀಯರ ಕನಸು ನನಸು ಮಾಡುವ ಪಣತೊಟ್ಟಿದೆ. ವಿಶ್ವಕಪ್ ನ ಮೊದಲ ಪಂದ್ಯ ಜೂನ್ 5ರಂದು ಸೌತ್ ಆಫ್ರಿಕಾ ವಿರುದ್ಧ ನಡೆಯಲಿದ್ದು, ಅದಕ್ಕೂ ಮುನ್ನಾ ಟೀಮ್ ಇಂಡಿಯಾಗೆ ಫಿಟ್ನೆಸ್ ಅಗ್ನಿಪರೀಕ್ಷೆ ಎದುರಾಗಿದೆ. ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ.
ಟೀಮ್ ಇಂಡಿಯಾ ಆಟಗಾರರ ಕಠಿಣ ತಾಲೀಮು..!
ಐಪಿಎಲ್ ಬಳಿಕ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದ ಟೀಮ್ ಇಂಡಿಯಾ ಆಟಗಾರರು ನೆಟ್ಸ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಲಂಡನ್ನ ಓವೆಲ್ ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಧವನ್, ಕೆ.ಎಲ್.ರಾಹುಲ್, ಪಾಂಡ್ಯಾ ಬ್ಯಾಟಿಂಗ್ ಅಭ್ಯಾಸ ನಡೆಸಿದ್ರೆ, ವೇಗಿಗಳಾದ ಜಪ್ರೀತ್ ಬೂಮ್ರಾ, ಭುವನೇಶ್ವರ್, ಮೊಹಮ್ಮದ್ ಶಮಿ ಬೌಲಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇನ್ನೂ ಕ್ಷೇತ್ರ ರಕ್ಷಣೆ ಬಗ್ಗೆ ಹೆಚ್ಚು ಗಮನ ಹರಿಸಿರೋ ಟೀಮ್ ಇಂಡಿಯಾ ಹೊಸ ರೀತಿಯ ಕೋಚಿಂಗ್ ನೀಡುತ್ತಿದೆ.
ಇನ್ನೂ ವಿಶ್ವಕಪ್ಗಾಗಿ ಭರ್ಜರಿ ತಾಲೀಮು ನಡೆಸಿರುವ ಆಟಗಾರರು ಸಂಪೂರ್ಣ ದೈಹಿಕ ಸಾಮರ್ಥ್ಯ ಪಡೆದಿದ್ದಾರೆ. ಆದ್ರೆ, ಟೀಮ್ ಇಂಡಿಯಾ ಆಟಗಾರರು ಎಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ. ಲಯದಲ್ಲಿದ್ದಾರೆ ಅನ್ನೋದು ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಬಳಿಕವಷ್ಟೇ ಗೊತ್ತಾಗಲಿದೆ.