ಚೊಚ್ಚಲ ವಿಶ್ವಕಪ್ಗೆ ಸಜ್ಜಾಗಿದ್ದಾರೆ ಸ್ಟಾರ್ ಆಟಗಾರರು..! ವಿಶ್ವಕಪ್ ಟೂರ್ನಿಯಲ್ಲೇ ಇವರೇ ಪ್ರಮುಖ ಆಕರ್ಷಣೆ

ಕ್ರಿಕೆಟ್ನ ಅತಿದೊಡ್ಡ ಸಂಭ್ರಮ ನಾಲ್ಕು ವರ್ಷಕ್ಕೊಮ್ಮೆ ಬರುವ ವಿಶ್ವಕಪ್. ಮೇ 30ರಿಂದ ಆರಂಭವಾಗಲಿರುವ 12ನೇ ಆವೃತ್ತಿಯ ಮಹಾ ಟೂರ್ನಿಗೆ ಕ್ರಿಕೆಟ್ ದೇಶಗಳೊಂದಿಗೆ ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕೆಲ ಬದಲಾವಣೆಗಳೊಂದಿಗೆ ಬರುತ್ತಿರುವ ಈ ಬಾರಿಯ ವಿಶ್ವಕಪ್ ಭವಿಷ್ಯದ ಪ್ರತಿಭೆಗಳಿಗೆ ದೊಡ್ಡ ಮಟ್ಟದ ವೇದಿಕೆ ಕಲ್ಪಿಸುವುದರಲ್ಲಿ ಅನುಮಾನವಿಲ್ಲ. ಆಧುನಿಕ ಕ್ರಿಕೆಟ್ ದಿಗ್ಗಜರ ಜೊತೆಗೆ ಮೊದಲ ಬಾರಿಗೆ ವಿಶ್ವಕಪ್ ಆಡಲು ಸಿದ್ಧವಾಗುತ್ತಿರುವ ಆಟಗಾರರು, ವಿಶ್ವಕಪ್ ಸ್ಮರಣೀಯವಾಗಿಸಲು ಸಜ್ಜಾಗಿದ್ದಾರೆ

ಜೇಸನ್ ರಾಯ್
ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿರುವ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗದ ಪ್ರಮುಖ ಅಸ್ತ್ರ ಜೇಸನ್ ರಾಯ್. 2015ರ ಮಾರ್ಚ್ 8 ರಂದು ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ದಿನದಿಂದ ಆಡಿದ 76 ಏಕದಿನ ಪಂದ್ಯಗಳಲ್ಲಿ 2938 ರನ್ ಬಾರಿಸಿದ್ದಾರೆ. 300 ಪ್ಲಸ್ ಮೊತ್ತಗಳು ಸಾಮಾನ್ಯವಾಗಿರುವ ಈ ದಿನಗಳಲ್ಲಿ ಇಂಗ್ಲೆಂಡ್ನ ಚೇಸಿಂಗ್ ಮಾಸ್ಟರ್ ಆಗಿ ರಾಯ್ ರೂಪುಗೊಂಡಿದ್ದಾರೆ. ದೊಡ್ಡ ಮಟ್ಟದ ಚೇಸಿಂಗ್ ವೇಳೆ ಜೇಸನ್ ರಾಯ್ ಆಟ ನೋಡುವುದೇ ಕಣ್ಣಿಗೆ ಹಬ್ಬ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನನಲ್ಲಿ 180 ರನ್ ಬಾರಿಸಿದ್ದು ಗರಿಷ್ಠ ಮೊತ್ತವಾಗಿದೆ. ಇದೇ ವರ್ಷ ವೆಸ್ಟ್ ಇಂಡೀಸ್ ವಿರುದ್ಧ 65 ಎಸೆತಗಳಲ್ಲಿ ಶತಕ ಬಾರಿಸಿದ್ದರು..

ಬಾಬರ್ ಅಜಮ್
ಪಾಕಿಸ್ತಾನ ಪ್ರತಿಭಾವಂತ ವೇಗದ ಬೌಲರ್ಗಳನ್ನು ರೂಪಿಸುವ ತಂಡವಾಗಿದ್ದರೂ, ಕಳೆದ ಎರಡು ವರ್ಷಗಳಲ್ಲಿ ಬಾಬರ್ ಅಜಮ್ ಬ್ಯಾಟ್ಸ್ಮನ್ ಆಗಿ ಸ್ಥಿರ ಆಟ ವಾಡಿದ್ದಾರೆ. 2015ರಲ್ಲಿ ಪದಾರ್ಪಣೆ ಮಾಡಿದ ಬಲಗೈ ಆಟಗಾರ ಈವರೆಗೂ ಆಡಿದ 64 ಪಂದ್ಯಗಳಿಂದ 2739 ರನ್ ಬಾರಿಸಿದ್ದು, ವಿಶ್ವ ಱಂಕಿಂಗ್ನಲ್ಲಿ 7ನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ವೇಳೆ ಇವರಿಂದ ಹೆಚ್ಚಿನ ನಿರೀಕ್ಷೆಯಲ್ಲಿ ಪಾಕ್ ತಂಡವಿದೆ. ಏಕದಿನ ಪಂದ್ಯದಗಳಲ್ಲಿ ತಾನಾಡಿದ ಮೊದಲ ಮೂರು ಪಂದ್ಯಗಳಲ್ಲಿ ಸತತ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಬಾಬರ್ ಅಜಮ್ ಪಾತ್ರರಾಗಿದ್ದಾರೆ..

ಜಸ್ಪ್ರೀತ್ ಬುಮ್ರಾ
ಭಾರತ ತಂಡದ ಪಾಸ್ಟ್ ಬೌಲಿಂಗ್ ಡಿಪಾರ್ಟ್ಮೆಂಟ್ನ ಪ್ರಧಾನ ಅಸ್ತ್ರವಾಗಿ ಜಸ್ಪ್ರೀತ್ ಬುಮ್ರಾ ಗುರುತಿಸಿಕೊಂಡಿದ್ದಾರೆ. ಪಂದ್ಯದ ಯಾವುದೇ ಹಂತದಲ್ಲಿ ವಿಕೆಟ್ ಉರುಳಿಸೋದ್ರಲ್ಲಿ ಬೂಮ್ರಾ ಎತ್ತಿದ ಕೈ.. ಬ್ಯಾಟ್ಸ್ಮನ್ಗಳ ಎಣಿಕೆಗೆ ಸಿಗದ ಬೌನ್ಸರ್ಗಳು, ಕಾಲಿನ ಹೆಬ್ಬೆರಳನ್ನು ಚಿಂದಿ ಮಾಡುವ ಯಾರ್ಕರ್, ಯಾವ ಶಾಟ್ ಬಾರಿಸಬೇಕು ಎಂದು ಚಿಂತೆಗೆ ದೂಡುವ ನಿಧಾನಗತಿಯ ಎಸೆತಗಳು ಇವೆಲ್ಲವೂ ಬುಮ್ರಾರ ಬತ್ತಳಿಕೆಯಲ್ಲಿವೆ. ಆಧುನಿಕ ಯುಗದ ವೇಗದ ಬೌಲರ್ಗಳಿಗೆ ಬೇಕಾದ ಎಲ್ಲ ರೀತಿಯ ಅಸ್ತ್ರಗಳು ಬುಮ್ರಾ ಬಳಿ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಐಸಿಸಿ ಱಂಕಿಂಗ್ನಲ್ಲಿ ನಂ.1 ಏಕದಿನ ಬೌಲರ್. ತೀರಾ ಅಪರೂಪ ಎನ್ನುವಂತೆ ವಿಶ್ವಕಪ್ನಂಥ ಪ್ರಧಾನ ಟೂರ್ನಿಯಲ್ಲಿ ಭಾರತ ಯಾವುದೇ ಬೌಲಿಂಗ್ ಹಿನ್ನಡೆಯಿಲ್ಲದೆ ತೆರಳುತ್ತಿದೆ. ಇನ್ನೂ 15 ವಿಕೆಟ್ ಉರುಳಿಸಿದ್ರೆ 100 ವಿಕೆಟ್ ಪಡೆದ ಸಾಧನೆ ಬರೆಯಲಿದ್ದಾರೆ.

ಕಗಿಸೋ ರಬಾಡ
ದಕ್ಷಿಣ ಆಫ್ರಿಕಾದ ಉರಿವೇಗದ ದಾಳಿಕಾರ. ಸಾರ್ವಕಾಲಿಕ ಶ್ರೇಷ್ಠ ವೇಗಿಯಾಗುವ ಎಲ್ಲ ಅರ್ಹತೆ ಇದೆ. 20ನೇ ವಯಸ್ಸಿನಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ ರಬಾಡ ಈವರೆಗೆ ಆಡಿದ 66 ಪಂದ್ಯಗಳಿಂದ 26.43ರ ಸರಾಸರಿಯಲ್ಲಿ 106 ವಿಕೆಟ್ ಉರುಳಿಸಿದ್ದಾರೆ. ವಿಶ್ವ ನಂ.5 ವೇಗದ ಬೌಲರ್. ಸ್ಟೈನ್, ಫಿಲಾಂಡರ್ಗಳಂಥ ಸ್ಟಾರ್ಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ರಬಾಡ ಎಕ್ಸ್-ಫ್ಯಾಕ್ಟರ್ ಆಗುವುದರಲ್ಲಿ ಅನುಮಾನವಿಲ್ಲ.

ರಶೀದ್ ಖಾನ್
ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡುವುದರಲ್ಲಿ 21ವರ್ಷದ ರಶೀದ್ ಖಾನ್ ನಿಸ್ಸೀಮರು. ಬೌಲಿಂಗ್ ಱಂಕಿಂಗ್ನಲ್ಲಿ 3ನೇ ಸ್ಥಾನದಲ್ಲಿರುವ ರಶೀದ್, ಆಲ್ರೌಂಡರ್ ಱಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 57 ಏಕದಿನದಿಂದ 15ರ ಸರಾಸರಿಯಲ್ಲಿ 123 ವಿಕೆಟ್ ಉರುಳಿಸಿರುವ ರಶೀದ್, ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ.

ಮೊದಲ ವಿಶ್ವಕಪ್ ಆಡಲು ಸಜ್ಜಾಗಿರುವ ಈ ಆಟಗಾರರು. ತಮ್ಮ ಜೀವನದ ಸ್ಮರಣೀಯ ಕ್ಷಣವಾಗಿಸುವ ಕನಸಿನಲ್ಲಿದ್ದಾರೆ.. ಹೀಗಾಗಿ ಈ ಆಟಗಾರರ ಪ್ರದರ್ಶನದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ