ತೆಲಂಗಾಣದಲ್ಲೂ ನಾಲ್ಕು ಸ್ಥಾನ ಗೆದ್ದು ದಾಖಲೆ ಬರೆದ ಬಿಜೆಪಿ

ಬೆಂಗಳೂರು,ಮೇ 24-ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನೆರೆಯ ತೆಲಂಗಾಣದಲ್ಲೂ ನಾಲ್ಕು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಹೊಸ ದಾಖಲೆಯನ್ನು ಬರೆದಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ 17 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದು ಸ್ಥಾನವನ್ನು ಗೆಲ್ಲಿಸಲು ಮಾತ್ರ ಸಾಧ್ಯವಾಗಿತ್ತು.ಈ ಬಾರಿ ರಾಜ್ಯದ ಒಟ್ಟು 17 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಒಟ್ಟು 4 ಸ್ಥಾನಗಳನ್ನು ಗೆದ್ದಿದೆ.

ತೀರಾ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಭಾರೀ ಹಿನ್ನಡೆ ಎದುರಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅಲೆಯಿಂದಾಗಿ ನಾಲ್ಕು ಸ್ಥಾನಗಳನ್ನು ಗೆದ್ದು ಬೀಗಿದೆ.

ಕರೀಂನಗರ ಲೋಕಸಭಾ ಕ್ಷೇತ್ರದಿಂದ ಬಂಡಿ ಸಂಜಯ್, ಅದಿಲಬಾದ್‍ನಿಂದ ಬಾಪುರಾವ್, ನಿಜಾಮಾಬಾದ್‍ನಿಂದ ಧರ್ಮಾಪುರ್ ಅರವಿಂದ್ ಹಾಗೂ ಸಿಕ್ಕಂದ್ರಬಾದ್‍ನಿಂದ ಜಿ.ಕಿಶನ್ ರೆಡ್ಡಿ ಗೆದ್ದಿದ್ದಾರೆ.

ತೆಲಂಗಾಣದಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿ ರಾಷ್ಟ್ರೀಯ ನಾಯಕರು ಸಂಘಟನೆಯ ಚತುರ ಹಾಗೂ ಆರ್‍ಎಸ್‍ಎಸ್ ಹಿನ್ನಲೆಯುಳ್ಳ ಅರವಿಂದ ಲಿಂಬಾವಳಿ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದ್ದರು.

ರಾಜ್ಯ ಉಸ್ತುವಾರಿಯಾದ ನಂತರ ತೆಲಂಗಾಣದಲ್ಲಿ ಸ್ಥಳೀಯ ನಾಯಕರ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದ ಲಿಂಬಾವಳಿ ಚುನಾವಣೆಯನ್ನು ಗೆಲ್ಲಲು ಬೇಕಾದ ಕಾರ್ಯತಂತ್ರವನ್ನು ರೂಪಿಸಿದ್ದರು.

ಆರ್‍ಎಸ್‍ಎಸ್ ನಾಯಕರ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ಪಡೆದಿದ್ದ ಅವರು, ಗೆಲ್ಲುವ ಕ್ಷೇತ್ರಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕೆ ಸಜ್ಜುಗೊಳಿಸಿದ್ದರು.

ಜೊತೆಗೆ ಈ ಬಾರಿ ತೆಲಂಗಾಣದಲ್ಲಿ ಗೆಲ್ಲಲೇಬೇಕೆಂದು ತೀರ್ಮಾನಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ತೆಲಂಗಾಣದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು.

ಗೆಲ್ಲುವ ಕ್ಷೇತ್ರಗಳನ್ನು ಆಯ್ಕೆ ಮಾಡಿ ಪ್ರಚಾರ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.

ಸ್ಥಳೀಯ ವಿಷಯ ಹಾಗೂ ರಾಷ್ಟ್ರೀಯ ವಿಷಯಗಳನ್ನು ಮುಂದಿಟ್ಟುಕೊಂಡಿದ್ದ ಲಿಂಬಾವಳಿ ಗೆಲುವಿಗೆ ಬೇಕಾದ ರಣತಂತ್ರವನ್ನು ರೂಪಿಸಿದ್ದರು.

ಇನ್ನು ಕೋಲಾರ ಲೋಕಸಭಾ ಕ್ಷೇತ್ರದಲ್ಲೂ ಈ ಬಾರಿ ಮುನಿಸ್ವಾಮಿ ಅವರನ್ನು ಕಣಕ್ಕಿಳಿಸುವಲ್ಲಿ ಲಿಂಬಾವಳಿ ಅವರ ಪಾತ್ರ ಪ್ರಮುಖವಾಗಿತ್ತು.

ಪ್ರಾರಂಭದಲ್ಲಿ ಈ ಕ್ಷೇತ್ರದಿಂದ ಡಿ.ಎಸ್.ವೀರಯ್ಯ, ಛಲವಾದಿ ನಾರಾಯಣಸ್ವಾಮಿ ತಮಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಕೊನೆ ಕ್ಷಣದಲ್ಲಿ ಲಿಂಬಾವಳಿ ಮುನಿಸ್ವಾಮಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು.

ಸತತ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುನಿಸ್ವಾಮಿ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ