ಬೆಂಗಳೂರು,ಮೇ 24- ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ಗೆ ಮತ್ತಷ್ಟು ತಳಮಳ ಆರಂಭಗೊಂಡಿದೆ.
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗ ಸಕ್ರಿಯರಾಗಿದ್ದು, ಅತೃಪ್ತರನ್ನು ಒಗ್ಗೂಡಿಸಲು ಸಭೆ ನಡೆಸುತ್ತಿದ್ದಾರೆ.
ಬಿಜೆಪಿ ನಾಯಕರ ಸ್ಪಷ್ಟ ನಿರ್ದೇಶನದ ಮೇರೆಗೆ ಕಾರ್ಯಾಚರಣೆಗಿಳಿದಿರುವ ರಮೇಶ್ಜಾರಕಿಹೊಳಿ ಕಾಂಗ್ರೆಸ್ನಿಂದ ಹೊರಗೆ ಕಾಲಿಟ್ಟವರನ್ನು ಸಂಪರ್ಕಿಸಿದ್ದಾರೆ.
ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರು ಸಮ್ಮಿಶ್ರ ಸರ್ಕಾರದ ವಿರುದ್ದ ಸಿಡಿದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು, ಕಾಂಗ್ರೆಸ್ನಲ್ಲಿ ಹೊಸ ಭರವಸೆಗಳು ಹುಟ್ಟಬಹುದು ಎಂಬ ನಿರೀಕ್ಷೆಯಲ್ಲಿದ್ದ ಪಕ್ಷದಲ್ಲಿ ಏಕಾಏಕಿ ಪಾಳುಬಾವಿಗೆ ತಳ್ಳಿದಂತಾಗಿದೆ.
ಕರ್ನಾಟಕದಲ್ಲಿ ಹೀನಾಯ ಸೋಲುಕಂಡ ಕಾಂಗ್ರೆಸ್ಗೆ ಇನ್ನು ಭವಿಷ್ಯವಿದೆ ಎಂದು ಶಾಸಕರಿಗೆ ಅನಿಸುತ್ತಿಲ್ಲ. ಫಲಿತಾಂಶದ ನಂತರ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿಯವರು ಉಳಿಸುವಂತೆ ಕಾಣುತ್ತಿಲ್ಲ. ಇನ್ನು ಪಕ್ಷದಲ್ಲೇ ಇದ್ದರೆ ನಮ್ಮ ರಾಜಕೀಯ ಭವಿಷ್ಯಕ್ಕೂ ಮುಳುವಾಗಲಿದೆ ಎಂದು ಹೇಳುತ್ತಿರುವ ಬಹುತೇಕ ಶಾಸಕರು ರಾಜೀನಾಮೆ ನೀಡಲು ಸಿದ್ದರಾಗಿದ್ದಾರೆ.
ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ರಮೇಶ್ ಜಾರಕಿಹೊಳಿ, ತಮ್ಮನ್ನು ಸಂಪುಟದಿಂದ ಕೈ ಬಿಟ್ಟು ಅವಮಾನ ಮಾಡಿ ಜಿಲ್ಲಾ ರಾಜಕಾರಣದಲ್ಲೂ ಮೂಲೆಗುಂಪು ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ ನಾಯಕರು ಏನೆಲ್ಲಾ ಸರ್ಕಸ್ ಮಾಡಿದರೂ ಅದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಭರ್ಜರಿ ಆಫರ್ಗಳನ್ನು ಕೊಡಿಸುವ ಪ್ರಸ್ತಾವನೆಯೊಂದಿಗೆ ರಮೇಶ್ಜಾರಕಿಹೊಳಿ ಕಾಂಗ್ರೆಸ್ ಅತೃಪ್ತರನ್ನು ಸಂಪರ್ಕಿಸುತ್ತಿದ್ದಾರೆ.
ಬೆಂಗಳೂರಿನಲ್ಲಿಂದು ಸರ್ಕಾರಿ ಬಂಗಲೆಯಲ್ಲಿ ಕುರಿತು ಆಪ್ತರೊಂದಿಗೆ ಸಮಾಲೋಚನೆ ನಡೆಸಿದ ರಮೇಶ್ ಜಾರಕಿಹೊಳಿ ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಸಂಪರ್ಕಿಸಿದ್ದಾರೆ. ಅದರಲ್ಲಿ ಬಹಳಷ್ಟು ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಬೆಳಗಾವಿ ಜಿಲ್ಲೆಯಲ್ಲಿ ತಮ್ಮನ್ನು ಕಡೆಗಣಿಸಿದ ನಾಯಕರ ಎದುರು ಸರ್ಕಾರಿ ಕಾರಿನಲ್ಲಿ ಓಡಾಡುವ ಕನಸು ಕಾಣುತ್ತಿರುವ ರಮೇಶ್ಜಾರಕಿಹೊಳಿ ಅವರು ಅದನ್ನು ಈಡೇರಿಸಿಕೊಳ್ಳಲು ಬಿಜೆಪಿ ನಾಯಕರಿಗಿಂತಲೂ ಹೆಚ್ಚು ಮುತುವರ್ಜಿ ವಹಿಸಿದ್ದಾರೆ.