ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರೇ ಮುಂದುವರೆಯಬೇಕು-ಸಲಹೆ ಮಾಡಿದ ಕಾಂಗ್ರೇಸ್ ಹೈಕಮಾಂಡ್

ಬೆಂಗಳೂರು,ಮೇ 24-ಲೋಕಸಭೆ ಚುನಾವಣೆ ಫಲಿತಾಂಶದಿಂದ ಅಸಮಾಧಾನಗೊಂಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮನವೊಲಿಸುವ ಪ್ರಯತ್ನ ಮಾಡಿರುವ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಒತ್ತಾಯಿಸಿದ್ದಾರೆ.

ನಿನ್ನೆ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಸೋತ ನಂತರ ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿರುವ ರಾಜ್ಯದ ಕಾಂಗ್ರೆಸ್ ನಾಯಕರು, ಪ್ರಸ್ತುತ ಪರಿಸ್ಥಿತಿಯಲ್ಲಿ ನೀವೇ ಮುಂದುವರೆಯುವುದು ಸೂಕ್ತ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡುವಂತಹ ಪರಿಸ್ಥಿತಿ ಈಗಿಲ್ಲ. ಮಿತ್ರ ಪಕ್ಷಗಳಿಗೆ ಚುನಾವಣೆಯಲ್ಲಿ ಸಮಾನ ಹಿನ್ನಡೆಯಾಗಿರುವುದರಿಂದ ಮುಖ್ಯಮಂತ್ರಿಯಾಗಿ ನೀವೇ ಮುಂದುವರೆಯಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಕೂಡ ಕುಮಾರಸ್ವಾಮಿ ಅವರಿಗೆ ಸಲಹೆ ಮಾಡಿದೆ.

ಮೈತ್ರಿ ಸರ್ಕಾರದ ಕೆಲ ಸಚಿವರು ಹಾಗೂ ಕಾಂಗ್ರೆಸ್‍ನ ಕೆಲವು ಶಾಸಕರು ಇತ್ತೀಚಿಗೆ ನೀಡಿದ್ದ ಹೇಳಿಕೆಗಳಿಂದ ಬೇಸತ್ತಿರುವ ಕುಮಾರಸ್ವಾಮಿ, ಆ ಸಂದರ್ಭದಲ್ಲಿ ನಮಗೆ ನಿಮ್ಮ ಸಹವಾಸ ಬೇಡ. ಮುಖ್ಯಮಂತ್ರಿ ಸ್ಥಾನ ನೀವೇ ಇಟ್ಟುಕೊಳ್ಳಿ. ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರವನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಇದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಸ್ತಾಪ ಬೇಡ, ನಿಮ್ಮ ನಾಯಕತ್ವದಲ್ಲೇ ಸರ್ಕಾರವನ್ನು ಮುನ್ನಡೆಸೋಣ, ಏನೇ ಭಿನ್ನಾಭಿಪ್ರಾಯಬಂದರೂ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಕಾಂಗ್ರೆಸ್‍ನ ಕೆಲವು ನಾಯಕರು ಕುಮಾರಸ್ವಾಮಿಯವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ