ಬೆಂಗಳೂರು, ಮೇ 24- ನೀತಿ-ಸಂಹಿತೆ ಜಾರಿ ಇರುವ ಸಂದರ್ಭದಲ್ಲೇ ಬಿಬಿಎಂಪಿ ಬಜೆಟ್ಗೆ ಸರ್ಕಾರ ಅನುಮೋದನೆ ನೀಡಿರುವುದನ್ನು ತಡೆಹಿಡಿಯಬೇಕೆಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇಂದು ಚುನಾವಣಾ ಆಯೋಗಕ್ಕೆ ತೆರಳಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ಅವರನ್ನು ಭೇಟಿಯಾಗಿ ಬಿಬಿಎಂಪಿ ಬಜೆಟ್ ಅನುಮೋದನೆಯನ್ನು ತಡೆಹಿಡಿಯಬೇಕೆಂದು ಮನವಿ ಮಾಡಿದರು.
ಬಿಬಿಎಂಪಿ 2019-20ನೆ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡುವಂತೆ ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ದೇಶದಲ್ಲಿ ಲೋಕಸಭಾ ಚುನಾವಣೆ ಇದ್ದುದರಿಂದ ಮೇ 27ರ ವರೆಗೂ ನೀತಿ-ಸಂಹಿತೆ ಜಾರಿಯಲ್ಲಿದೆ.ಈ ಸಂದರ್ಭದಲ್ಲಿ ಸರ್ಕಾರ ಯಾವುದೇ ಅನುಮೋದನೆ ನೀಡುವಂತಿಲ್ಲ. ಹಾಗಾಗಿ ಸರ್ಕಾರ ಅನುಮೋದನೆ ನೀಡಿರುವ ಬಜೆಟ್ಅನ್ನು ತಡೆಹಿಡಿಯಬೇಕೆಂದು ಅವರು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದೇ ಮೇ 22ರಂದು ಸರ್ಕಾರ 10,129 ಕೋಟಿ ರೂ.ಗಳ ಬಜೆಟ್ಗೆ ಅನುಮೋದನೆ ನೀಡಿತ್ತು.ಜತೆಗೆ ಸದರಿ ಅಂದಾಜು ಮೊತ್ತದ ಮೇಲೆ ಶೇ.15ರಷ್ಟು ಹೆಚ್ಚಿನ ಆಯವ್ಯಯವನ್ನು ಅಂದಾಜಿಸಿ ಪಾಲಿಕೆ ಬಜೆಟ್ಅನ್ನು 11,645 ಕೋಟಿ ರೂ.ಗೆ ಮಿತಿಗೊಳಿಸಿ ಅನುಮೋದನೆ ನೀಡಿತ್ತು.
ಉಳಿಕೆ ಮೊತ್ತವಾದ 1308 ಕೋಟಿ ರೂ.ಗಳಿಗೆ ಬಿಬಿಎಂಪಿಯ ಪೂರಕ ಆಯವ್ಯಯದಲ್ಲಿ ಅವಕಾಶ ಮಾಡಿಕೊಳ್ಳಲು ಸರ್ಕಾರ ಸೂಚಿಸಿದ್ದು, ಇದು ಕಾನೂನು ಬಾಹಿರ.ನೀತಿ-ಸಂಹಿತೆ ಜಾರಿ ಇರುವಾಗಲೇ ಬಜೆಟ್ಗೆ ಅನುಮೋದನೆ ನೀಡಿರುವುದು ಸರಿಯಲ್ಲ. ಕೂಡಲೇ ಇದನ್ನು ತಡೆಯಬೇಕು ಎಂದು ಪದ್ಮನಾಭರೆಡ್ಡಿ ಒತ್ತಾಯಿಸಿದ್ದಾರೆ.