ಚುನಾವಣೆಯಲ್ಲಿನ ಸೋಲಿನ ಬಗ್ಗೆ ದೃತಿಗೆಡದೆ ಪಕ್ಷ ಸಂಘಟನೆ ಮಾಡಿ

ಬೆಂಗಳೂರು, ಮೇ 24- ಲೋಕಸಭೆ ಚುನಾವಣೆಯ ಅನಿರೀಕ್ಷಿತ ಸೋಲಿನ ಬಗ್ಗೆ ಧೃತಿಗೆಡದೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವಂತೆ ಜೆಡಿಎಸ್ ನಾಯಕರು ಪಕ್ಷದ ಶಾಸಕರಿಗೆ ಸಲಹೆ ಮಾಡಿದ್ದಾರೆ.

ಇಂದು ಜೆಪಿ ಭವನದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸಮ್ಮುಖದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಸಲಹೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಇದರಿಂದ ಎದೆಗುಂದಬೇಕಿಲ್ಲ. ರಾಜಕೀಯ ಪಕ್ಷವೆಂದ ಮೇಲೆ ಸೋಲು-ಗೆಲುವು ಇದ್ದದ್ದೆ. ಜನಾದೇಶ ಸ್ವೀಕರಿಸಿ ಪಕ್ಷವನ್ನು ಸಂಘಟಿಸುವತ್ತ ಶಾಸಕರು ಗಮನ ಹರಿಸಬೇಕು ಎಂದು ಹಿತೋಪದೇಶ ಮಾಡಿದ್ದಾರೆ.

ಮೇ 30ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸಿ ಪಕ್ಷದ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲ್ಲುವಂತೆ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಸೋಲಿನ ಪರಾಮರ್ಶೆಯನ್ನು ಸಭೆಯಲ್ಲಿ ಮಾಡಿದ್ದು, ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿದ್ದರೂ ಕೇವಲ ಒಂದು ಕ್ಷೇತ್ರದಲ್ಲಷ್ಟೇ ಗೆಲ್ಲಲು ಸಾಧ್ಯವಾಗಿದೆ. ಉಳಿದ ಕ್ಷೇತ್ರಗಳಲ್ಲಿ ಸೋಲಲು ಕಾರಣವೇನು ಎಂಬುದರ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗಿದೆ. ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸಿದ್ದ ತುಮಕೂರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದ ಮಂಡ್ಯ ಕ್ಷೇತ್ರದಲ್ಲಿ ಸೋತಿರುವ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ಸೋಲಿಗೆ ಮುಳುವಾಯಿತೇ?ಮೈತ್ರಿ ಮಾಡಿಕೊಂಡರೂ ತಳಮಟ್ಟದಲ್ಲಿ ಕಾರ್ಯಕರ್ತರ ನಡುವೆ ಹೊಂದಾಣಿಕೆಯಾಗದೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡಿದ್ದು ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತು ಮತ್ತೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸ್ತಾಪವನ್ನು ಎಚ್.ವಿಶ್ವನಾಥ್ ಸಭೆಯಲ್ಲಿ ಮಾಡಿದ್ದಾರೆ. ಇದಕ್ಕೆ ವರಿಷ್ಠರು ಒಪ್ಪಿಗೆ ಸೂಚಿಸಿಲ್ಲ, ಸೋಲಿನ ಹೊಣೆ ನಿಮ್ಮೊಬ್ಬರದ್ದೇ ಅಲ್ಲ, ಎಲ್ಲರೂ ಹೊರಬೇಕಾಗುತ್ತದೆ. ಈ ಸೋಲಿನಿಂದ ಧೃತಿಗೆಡದೆ ಮುಂದೆ ಪಕ್ಷವನ್ನು ಸದೃಢಗೊಳಿಸುವ ಕಡೆಗೆ ಈಗಿನಿಂದಲೇ ಕಾರ್ಯೋನ್ಮುಖರಾಗುವ ಬಗ್ಗೆ ಗಮನ ಹರಿಸೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸಭೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪದ್ಮನಾಭನಗರದ ಮನೆಗೆ ತೆರಳಿ ದೇವೇಗೌಡರನ್ನು ಭೇಟಿ ಮಾಡಿ ಚುನಾವಣೆ ಸೋಲಿನ ಪರಾಮರ್ಶೆ ನಡೆಸಿದರು. ರಾಜ್ಯದ ಮೈತ್ರಿ ಸರ್ಕಾರ ಮುನ್ನಡೆಸುವ ಬಗ್ಗೆ, ಕಾಂಗ್ರೆಸ್ ಸಚಿವರು, ಶಾಸಕರು ನೀಡುತ್ತಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಉಂಟಾಗುತ್ತಿರುವ ಮುಜುಗರ, ಬಿಜೆಪಿ ನಡೆಸಲಿರುವ ಆಪರೇಷನ್ ಕಮಲ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚಿಸಿ ಗೌಡರ ಸಲಹೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ