ಇಂಗ್ಲೆಂಡ್: ಬ್ರಟಿನ್ ಪ್ರಧಾನಿ ತೆರೇಸಾ ಮೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕಿ ಹುದ್ದೆಯನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ ಮೇ, ಪ್ರಧಾನಿ ಹುದ್ದೆಗೂ ಜೂನ್ 7ರಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ತೆರೇಸಾ ಮೇ ರೂಪಿಸಿದ್ದ ಬ್ರೆಕ್ಸಿಟ್ ಒಪ್ಪಂದಕ್ಕೆ ಅನುಮೋದನೆ ನೀಡಲು ಬ್ರಿಟನ್ ಸಂಸತ್ತು ಮೂರು ಬಾರಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಭಾರಿ ಟೀಕೆಗೆ ಒಳಗಾಗಿದ್ದರು. ಆದ್ದರಿಂದ, ಪ್ರಧಾನಿ ಹುದ್ದೆ ತ್ಯಜಿಸಲು ನಿರ್ಧರಿಸಿದ್ದರು. ಆದರೆ, ಜೂನ್ 7ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಟನ್ ಪ್ರವಾಸಕ್ಕೆ ಆಗಮಿಸುತ್ತಿರುವ ದಿನದಂದೇ ಮೇ ನಿರ್ಗಮಿಸುತ್ತಿರುವುದು ಮಹತ್ವದ್ದಾಗಿದೆ.
ಮಾರ್ಗರೆಟ್ ಥ್ಯಾಚರ್ ನಂತರ ಬ್ರಿಟನ್ನ ಎರಡನೇ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ತೆರೇಸಾ ಮೇ 10, ಡೌನಿಂಗ್ ಸ್ಟ್ರೀಟ್ನಲ್ಲಿರುವ ಪ್ರಧಾನಿ ನಿವಾಸವನ್ನು ಹೊಕ್ಕಿದ್ದರು. ನಾನು ಪ್ರಧಾನಿ ಆದಾಗಿನಿಂದಲೂ ಬ್ರೆಕ್ಸಿಟ್ ಒಪ್ಪಂದದ ಕುರಿತು ಪಕ್ಷದ ಸಂಸತ್ ಸದಸ್ಯರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ತನ್ಮೂಲಕ ಪ್ರತಿಷ್ಠಿತರ ಪರವಾಗಿ ಮಾತ್ರವಲ್ಲ ಬ್ರಿಟನ್ನ ಕಟ್ಟಕಡೆಯ ವ್ಯಕ್ತಿಯ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧವಾಗಿದೆ. ಹಾಗೂ ಬ್ರೆಕ್ಸಿಟ್ ವಿಚಾರದಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಲು ಬದ್ಧ ಎಂಬುದನ್ನು ಸಾಬೀತು ಪಡಿಸಲು ಸಾಕಷ್ಟು ಪ್ರಯತ್ನಿಸಿದೆ. ಆದರೆ, ಈ ಪ್ರಯತ್ನದಲ್ಲಿ ನಾನು ವಿಫಲವಾದೆ. ಆದ್ದರಿಂದ, ರಾಜೀನಾಮೆ ನೀಡುತ್ತಿದ್ದೇನೆ ಎಂದು ಮೇ ಭಾವುಕರಾಗಿ ಹೇಳಿದರು.