ಬೆಂಗಳೂರು: ಮತದಾನೋತ್ತರ ಸಮೀಕ್ಷೆ ನೋಡಿ ಬೇಜಾರಾಗಿದೆ. ಕೆಪಿಸಿಸಿ ಅಧ್ಯಕ್ಷ, ಸಮನ್ವಯ ಸಮಿತಿ ಅಧ್ಯಕ್ಷ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೇ ಈ ಸ್ಥಿತಿಗೆ ಕಾರಣ ಎಂದು ಕಾಂಗ್ರೆಸ್ ನಾಯಕ ರೋಷನ್ ಬೇಗ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಬೇಕಾಗುತ್ತದೆ. ಸಿಎಲ್ಪಿ ನಾಯಕ ಯಾರಾಗಬೇಕೆಂದು ನಾನು ಹೇಳುವುದಿಲ್ಲ. ಒಂದು ಸಮುದಾಯ ಒಡೆಯಲು ಸಿದ್ದರಾಮಯ್ಯ ಹೋದರು. ಮತ್ತೊಂದು ಸಮುದಾಯ ತೆಗಳುವ ಕೆಲಸವನ್ನು ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ಗೆ ಈ ಪರಿಸ್ಥಿತಿ ಬರಲು ಸಿದ್ದರಾಮಯ್ಯ ಕಾರಣ ಎಂದು ದೂರಿದರು.
ಖಾತೆಗಳು ಮಾರಾಟವಾಗಿವೆ. ನಾನೇಗೆ ಕುಮಾರಸ್ವಾಮಿಯವರನ್ನು ದೂಷಿಸಲಿ? ಈ ಸರ್ಕಾರದಲ್ಲಿ ಅವರಿಗೆ ಕಾರ್ಯನಿರ್ವಹಿಸಲು ಬಿಡಲಿಲ್ಲ. ಮೊದಲ ದಿನದಿಂದಲೂ ಸಿದ್ದರಾಮಯ್ಯ ನಾನೇ ಸಿಎಂ ಆಗುತ್ತೇನೆ ಎಂದು ಹೇಳುತ್ತಲೇ ಬಂದಿದ್ದಾರೆ. ಮತ್ತೊಮ್ಮೆ ಸಿದ್ದರಾಮಯ್ಯ ಅಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕೆ.ಸಿ.ವೇಣುಗೋಪಾಲ್ ಅವರು ಬಫೂನ್. ರಾಹುಲ್ ಗಾಂಧಿಜೀ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಬಫೂನ್ ವೇಣುಗೋಪಾಲ್ರ ಸೊಕ್ಕಿನ ನಡೆ, ಸಿದ್ದರಾಮಯ್ಯ ಮತ್ತು ಫ್ಲಾಫ್ ಶೋ ನಾಯಕ ಗುಂಡೂರಾವ್ ಅವರಿಂದಾಗಿ ಈ ಫಲಿತಾಂಶ ಬಂದಿದೆ ಎಂದು ದೂರಿದ್ದಾರೆ.
ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಕೈ ಬಿಟ್ಟಿದೆ. ಮತಕ್ಕಾಗಿ ಮುಸ್ಲಿಂ ಸಮುದಾಯ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಬೇಸರವಾಗಿದೆ.
ಕ್ರಿಶ್ಚಿಯನ್ನರಿಗೆ ಒಂದು ಸೀಟನ್ನು ನೀಡಿಲ್ಲ ಮತ್ತು ಮುಸ್ಲಿಂರಿಗೆ ಕೇವಲ ಒಂದೇ ಸೀಟನ್ನು ನೀಡಲಾಗಿದೆ. ಅವರನ್ನು ಕಡೆಗಣಿಸಲಾಗಿದೆ. ಸೀಟು ಗೆಲ್ಲಬೇಕು ಅಂದಿದ್ರೆ ನನಗೆ ಟಿಕೆಟ್ ಕೊಡಬೇಕಿತ್ತು. ಚುನಾವಣೆಯಲ್ಲಿ ಹಿನ್ನಡೆಯಾದ್ರೆ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ಸಿಎಲ್ಪಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.