ಬೆಂಗಳೂರು, ಮೇ 8-ವಿದ್ಯಾಧಿದೇವತೆ ಸರಸ್ವತಿ ಮತ್ತು ಭಗವಾನ್ ಬುದ್ಧ ಅವರ ಪ್ರತಿಮೆಗಳನ್ನು ಅಕ್ಕಪಕ್ಕದಲ್ಲೇ ಏಕಕಾಲಕ್ಕೆ ಪ್ರತಿಷ್ಠಾಪಿಸಲು ನಿರ್ಧರಿಸುವ ಮೂಲಕ ಬೆಂಗಳೂರು ವಿಶ್ವವಿದ್ಯಾನಿಲಯ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದೆ.
ಈ ಮಧ್ಯೆ ಇಂದು ಬೆಳಗ್ಗೆ ವಿದ್ಯಾರ್ಥಿಗಳ ಗುಂಪೊಂದು ಕುಲಪತಿಗಳ ಕಚೇರಿಗೆ ನುಗ್ಗಿ ಬುದ್ಧ ಪ್ರತಿಮೆಯನ್ನು ಕದಲಿಸದಂತೆ ಧಮ್ಕಿ ಹಾಕಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರಿನ ವಿವಿ ಆವರಣದಲ್ಲಿದ್ದ ಸರಸ್ವತಿ ದೇವಿ ಪ್ರತಿಮೆ ಮುಕ್ಕಾಗಿತ್ತು.ಅದನ್ನು ಬದಲಾವಣೆ ಮಾಡುವ ಸಲುವಾಗಿ ತೆರವುಗೊಳಿಸಲಾಗಿತ್ತು.
ಹೊಸ ಪ್ರತಿಮೆ ಮತ್ತು ಪೀಠದ ನಿರ್ಮಾಣ ಕಾರ್ಯಕ್ಕೆ ವೆಚ್ಚವಾಗುವ ಹಣದ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಯಾದಾಗ ಆಕ್ಷೇಪಗಳು ಕೇಳಿ ಬಂದಿದ್ದವು.
ಹೀಗಾಗಿ ವಿವಿ ಕುಲಪತಿ ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿಮೆ ಮಾಡಿಸಿ ಪೀಠವನ್ನು ನಿರ್ಮಿಸಿ ಮುಂದಿನ ಶುಕ್ರವಾರ ಸರಸ್ವತಿ ಪ್ರತಿಮೆ ಪ್ರತಿಷ್ಠಾಪಿಸಲು ಮುಂದಾಗಿದ್ದರು. ಈ ಮಧ್ಯೆ ಏಕಾಏಕಿ ಕೆಲವರು ಸರಸ್ವತಿ ಪ್ರತಿಮೆ ಇದ್ದ ಜಾಗದಲ್ಲಿ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿದ್ದಲ್ಲದೆ, ಸಂಘರ್ಷಮಯ ವಾತಾವರಣ ನಿರ್ಮಿಸಿತ್ತು.
ಪರಿಸ್ಥಿತಿ ತಿಳಿಗೊಳಿಸಲು ವಿವಿ ಕೆಲ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಸರಸ್ವತಿ ಪ್ರತಿಮೆಯನ್ನು ಈ ಮೊದಲಿದ್ದ ಸ್ಥಳದಲ್ಲೇ ಪುನರ್ ಪ್ರತಿಷ್ಠಾಪಿಸುವುದು, ಅದರ ಪಕ್ಕದಲ್ಲೇ ಗೌರವಾನ್ವಿತವಾಗಿ ಬುದ್ಧ ವಿಗ್ರಹವನ್ನು ಪ್ರತಿಪ್ಠಾಪಿಸುವುದು. ಎರಡೂ ಪೀಠಗಳ ಎತ್ತರ ಹಾಗೂ ವಿಗ್ರಹಗಳ ತೂಕ ಸಮಾನಾಂತರವಾಗಿರುವಂತೆ ಎಚ್ಚರಿಕೆ ವಹಿಸುವುದು.ಪ್ರತ್ಯೇಕ ಪೀಠ ಸ್ಥಾಪಿಸುವವರೆಗೂ ಬುದ್ಧ ಪ್ರತಿಮೆಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು, ಎರಡೂ ಪ್ರತಿಮೆಗಳನ್ನು ಒಂದೇ ದಿನ ಪ್ರತಿಷ್ಠಾಪಿಸುವುದು ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಆವರೆಗೂ ವಿವಿ ವಿದ್ಯಾರ್ಥಿಗಳು ಸಹನೆಯಿಂದಿರುವಂತೆ ಕುಲಸಚಿವರು ಮನವಿ ಮಾಡಿದ್ದಾರೆ.
ಈ ಮಧ್ಯೆ ಇಂದು ಬೆಳಗ್ಗೆ ವಿದ್ಯಾರ್ಥಿ ಗುಂಪೊಂದು ಕುಲಪತಿಯವರ ಕಚೇರಿಗೆ ನುಗ್ಗಿದ್ದು, ಬುದ್ಧ ಪ್ರತಿಮೆ ವಿವಾದವನ್ನು ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಮೇ 23 ರ ನಂತರ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದಿಲ್ಲ. ಹಾಗಾಗಿ ಸಚಿವರ ಗಮನಕ್ಕೆ ವಿವಾದ ತರುವ ಅಗತ್ಯವೇನಿತ್ತು ಎಂದು ಕೂಗಾಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸ್ಥಾಪಿಸಲಾಗಿರುವ ಬುದ್ಧ ಪ್ರತಿಮೆಯನ್ನು ಕದಲಿಸದಂತೆಯೂ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.