ಕುತೂಹಲಕ್ಕೆ ಕಾರಣವಾದ ಶ್ರೀನಿವಾಸ್ ಪ್ರಸಾದ್ ಮತ್ತು ಎಚ್.ವಿಶ್ವನಾಥ್ ಭೇಟಿ

ಬೆಂಗಳೂರು,ಮೇ 8- ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಾಗೂ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸ್ ಪ್ರಸಾದ್‍ರ ಮನೆಗೆ ನಿನ್ನೆ ರಾತ್ರಿ ವಿಶ್ವನಾಥ್ ಗೌಪ್ಯವಾಗಿ ಭೇಟಿ ನೀಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ನಾನಾ ಸಂಶಯಗಳನ್ನು ಹುಟ್ಟು ಹಾಕಿದೆ.

ಒಂದೆಡೆ ಲೋಕಸಭೆ ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆಯಾದರೆ ಕಾಂಗ್ರೆಸ್ ಹೊಸ ಜನಾದೇಶ ಪಡೆಯುವ ನಿಟ್ಟಿನಲ್ಲಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಮೈಸೂರು ಭಾಗದ ಈ ಇಬ್ಬರು ಪ್ರಭಾವಿ ನಾಯಕರ ರಹಸ್ಯ ಭೇಟಿ ನಾನಾ ರೀತಿಯ ಊಹಪೋಹಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಉಭಯ ನಾಯಕರ ಮಾತುಕತೆ ವಿವರಗಳು ಪೂರ್ಣವಾಗಿ ಲಭ್ಯವಾಗಿಲ್ಲವಾದರೂ ಶ್ರೀನಿವಾಸ್‍ಪ್ರಸಾದ್ ಮತ್ತು ವಿಶ್ವನಾಥ್ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತಂತೆ ಗಂಭೀರ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗ ಬೇಕೆಂದು ಕಾಂಗ್ರೆಸ್‍ನ ಒಂದು ಗುಂಪು ಹೇಳುತ್ತಿರುವಾಗಲೇ ವಿಶ್ವನಾಥ್ ಯಾವ ಕಾರಣಕ್ಕಾಗಿ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಒಂದು ವೇಳೆ ಫಲಿತಾಂಶದ ನಂತರ ಕಾಂಗ್ರೆಸ್ ತೆರೆಮರೆಯಲ್ಲಿ ಜೆಡಿಎಸ್‍ಗೆ ಕೈ ಕೊಟ್ಟು ಚುನಾವಣೆಗೆ ಸಜ್ಜಾದರೆ ಅದಕ್ಕೆ ಪ್ರತಿತಂತ್ರವಾಗಿ ದಳಪತಿಗಳು ಕೂಡ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿ ವಿಶ್ವನಾಥ್ ಮತ್ತು ಶ್ರೀನಿವಾಸ್ ಪ್ರಸಾದ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಜೆಡಿಎಸ್‍ಗೆ ಕಾಂಗ್ರೆಸ್ ಕೈ ಕೊಟ್ಟು ಚುನಾವಣೆ ಎದುರಿಸಲು ಮುಂದಾದರೆ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷವಾಗಲಿ ಇಲ್ಲವೇ ಯಾವೊಬ್ಬ ಶಾಸಕರು ಚುನಾವಣೆಯನ್ನು ಎದುರಿಸುವ ಸ್ಥಿತಿಯಲ್ಲಿಲ್ಲ.

ಹೀಗಾಗಿ ಜೆಡಿಎಸ್ ರಾಜಕೀಯದಲ್ಲಿ ಏನಾಬೇಕಾದರೂ ಆಗಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ವನಾಥ್ ಮೂಲಕವೇ ತೆರೆಮರೆಯಲ್ಲಿ ಸರ್ಕಸ್ ನಡೆಸಿರಬಹುದೆಂಬ ವದಂತಿಯೂ ಹಬ್ಬಿದೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲು ವಿಶ್ವನಾಥ್ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಅದರಲ್ಲೂ ಬದ್ದವೈರಿಗಳಾಗಿದ್ದ ಸಿದ್ದರಾಮಯ್ಯ ಮತ್ತು ಸಚಿವ ಜಿ.ಟಿ.ದೇವೇಗೌಡ ಚುನಾವಣೆಯ ಕೊನೆಯ ಮೂರು ದಿನಗಳ ಮುನ್ನ ಜೊತೆಯಾಗಿ ಪ್ರಚಾರ ನಡೆಸಿದರು.ಆದರೆ ವಿಶ್ವನಾಥ್ ಮಾತ್ರ ವೇದಿಕೆಯನ್ನು ಹಂಚಿಕೊಳ್ಳಲೇ ಇಲ್ಲ.

ಸಿದ್ದರಾಮಯ್ಯನವರ ಮೇಲೆ ಇದ್ದ ರಾಜಕೀಯ ದ್ವೇಷವನ್ನು ಅವರು ಈಗಲೂ ಮರೆತಿಲ್ಲ. ಸಮನ್ವಯ ಸಮಿತಿ ಸದಸ್ಯರನ್ನಾಗಿ ಅವರನ್ನು ತೆಗೆದುಕೊಳ್ಳಬೇಕೆಂದು ಜೆಡಿಎಸ್ ಪ್ರಸ್ತಾಪ ಮುಂದಿಟ್ಟಿದ್ದರೂ ಸಿದ್ದರಾಮಯ್ಯ ಕಡೆಗಣಿಸಿದ್ದರು.

ಇದೀಗ ಮತದಾನ ಮುಗಿದ ನಂತರ ಎರಡೂ ಪಕ್ಷಗಳಲ್ಲಿ ಜಂಗೀ ಕುಸ್ತಿ ಏರ್ಪಟ್ಟಿದೆ. ಕೆಲವು ಕಡೆ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸಿಗರು ಬೆಂಬಲ ನೀಡಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್‍ಗೆ ಕಾಂಗ್ರೆಸ್ ಕೈಕೊಟ್ಟರೆ, ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್‍ನವರು ಮತ ಹಾಕಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಈ ಎಲ್ಲ ಬೆಳವಣಿಗೆಗಳ ನಡುವೆ ವಿಶ್ವನಾಥ್ ಮತ್ತು ಶ್ರೀನಿವಾಸ್ ಪ್ರಸಾದ್ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ