ಬೆಂಗಳೂರು, ಮೇ 1- ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಿಬಿಡಬೇಕು ಎಂಬ ಉತ್ಸಾಹದಲ್ಲಿದ್ದ ಕೈ ಶಾಸಕರಿಗೆ ಬಿಜೆಪಿ ಪಾಳಯದಿಂದ ನೀರಸ ಪ್ರತಿಕ್ರಿಯೆ ಸಿಕ್ಕಿದ್ದರಿಂದ ತ್ರಿಶಂಕು ಸ್ಥಿತಿಗೆ ತಲುಪುವಂತಾಗಿದೆ.
ಇತ್ತ ಪಕ್ಷದಲ್ಲೂ ಮರ್ಯಾದೆ ಕಳೆದುಕೊಂಡು, ಅತ್ತ ಬಿಜೆಪಿಯಲ್ಲೂ ಅವಕಾಶವಿಲ್ಲದೆ ಕಾಟಾಚಾರಕ್ಕೆ ಶಾಸಕರಾಗಿ ಕೆಲಸ ಮಾಡುವಂತಹ ಅನಿವಾರ್ಯತೆಗೆ ಕಾಂಗ್ರೆಸ್‍ನ ಅತೃಪ್ತ ಶಾಸಕರು ತಲುಪಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಅತೃಪ್ತ ಶಾಸಕರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿದ್ದು, ಯಾವುದೇ ಬ್ಲಾಕ್‍ಮೇಲ್‍ಗಳಿಗೆ ಜಗ್ಗದೆ ಪಕ್ಷದ ನಾಯಕರ ವಿರುದ್ಧವೇ ಹಾರಾಡಿ ಕೂಗಾಡಿದ ಶಾಸಕರನ್ನು ಬೇಕಾಬಿಟ್ಟಿಯಾಗಿ ನಡೆಸಿಕೊಳ್ಳಲಾಗುತ್ತಿದೆ.
ಇದರಿಂದಾಗಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲೂ ಅತೃಪ್ತ ಶಾಸಕರಿಗೆ ಹೆಚ್ಚಿನ ಮಣೆ ಹಾಕಿಲ್ಲ. ಪಕ್ಷದ ಧೋರಣೆಯಿಂದ ರೊಚ್ಚಿಗೆದ್ದ ಶಾಸಕರುಗಳು ಪಕ್ಷದ ಅಭ್ಯರ್ಥಿ ವಿರುದ್ಧವೂ ಕೆಲಸ ಮಾಡಿದ್ದಾರೆ. ಆ ಬಗ್ಗೆಯೂ ವರದಿ ಪಡೆದುಕೊಂಡಿರುವ ಕಾಂಗ್ರೆಸ್ ವರಿಷ್ಠರು ಅತೃಪ್ತರನ್ನು ಇನ್ನಷ್ಟು ಕಡೆಗಣಿಸಲಾರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಕೆಲವು ಶಾಸಕರುಗಳು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವುದು ಖಚಿತವಾಗಿದ್ದು, ಅಂತಹವರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈಗಾಗಲೇ ಪರ್ಯಾಯ ನಾಯಕತ್ವವನ್ನು ಹುಟ್ಟುಹಾಕಿದೆ.
ಸರ್ಕಾರವನ್ನು ಬೀಳಿಸಿಯೇ ಬಿಡುತ್ತೇವೆಂದು ಕಳೆದ ಬಾರಿ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿದ್ದು, ಬಿರುಸಿನ ಚಟುವಟಿಕೆ ನಡೆಸಿದ ಕೆಲವು ಕೈ ಶಾಸಕರುಗಳಿಗೆ ಬಿಜೆಪಿಯಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಆಪ್ತರು ಅತೃಪ್ತ ಶಾಸಕರ ಜತೆ ಮಾತುಕತೆ ನಡೆಸಿದರು. ಆದರೆ, ಅದಕ್ಕೆ ಬಿಜೆಪಿ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಲಿಲ್ಲ. ಒಂದು ವೇಳೆ ಯಡಿಯೂರಪ್ಪ ಅವರು ವಯೋಮಾನದ ಕಾರಣಕ್ಕಾಗಿ ಮುಖ್ಯಮಂತ್ರಿಯಾಗದೆ ಹೋದರೆ ಪರ್ಯಾಯ ನಾಯಕತ್ವ ಸೃಷ್ಟಿಯಾದರೆ ನಮ್ಮ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ ಎಂಬ ಅತೃಪ್ತರ ಪ್ರಶ್ನೆಗೆ ಬಿಜೆಪಿಯಲ್ಲಿ ಉತ್ತರ ಸಿಕ್ಕಿಲ್ಲ.
ರಾಷ್ಟ್ರೀಯ ಮಟ್ಟದ ಯಾವ ನಾಯಕರೂ ಕಾಂಗ್ರೆಸ್‍ನ ಅತೃಪ್ತ ಶಾಸಕರ ಜತೆ ಮಾತುಕತೆ ನಡೆಸಲು ಮುಂದಾಗಲಿಲ್ಲ. ಹೀಗಾಗಿ ಆಪರೇಷನ್ ಕಮಲ ಕೆಲವೊಮ್ಮೆ ಚಿಗುರೊಡೆಯುತ್ತದೆ, ಮತ್ತೊಮ್ಮೆ ಅಲ್ಲಿಯೇ ಮುದುಡಿಹೋಗುತ್ತಿದೆ.
ಸರ್ಕಾರ ಬಿದ್ದೇ ಹೋಯಿತು, ನಾವು ಸಚಿವರಾಗಿಯೇ ಬಿಡುತ್ತೇವೆ ಎಂದು ಗೂಟದ ಕಾರಿನ ಕನಸು ಕಾಣುತ್ತಿದ್ದ ಕಾಂಗ್ರೆಸ್‍ನ ಅತೃಪ್ತ ಶಾಸಕರುಗಳಿಗೆ ಇತ್ತ ಕಾಂಗ್ರೆಸ್‍ನಲ್ಲೂ ಮರ್ಯಾದೆ ಇಲ್ಲ, ಅತ್ತ ಬಿಜೆಪಿಯಲ್ಲೂ ಅವಕಾಶವಿಲ್ಲ ಎಂಬಂತಾಗಿದೆ.
ಆಪರೇಷನ್ ಕಮಲದ ಮಾತುಕತೆ ವೇಳೆ ಭಾರೀ ಹುಮ್ಮಸ್ಸಿನಿಂದ ಪಕ್ಷದ ನಾಯಕತ್ವದ ವಿರುದ್ಧವೇ ಕೆಲವು ಶಾಸಕರು ಮಾತನಾಡಿದರು. ಅಂತಹವರನ್ನೆಲ್ಲ ಲೋಕಸಭೆ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಬದಿಗೆ ಸರಿಸಲಾಗಿದೆ.
ಮುಂದಿನ ದಿನಗಳಲ್ಲಿ ನಿಗಮ-ಮಂಡಳಿ ನೇಮಕಾತಿ ಹಾಗೂ ಇತರ ಹುದ್ದೆಗಳ ವಿಷಯದಲ್ಲಿ ಸದರಿ ಶಾಸಕರಿಗೆ ಮತ್ತು ಶಾಸಕರ ಆಪ್ತ ಬೆಂಬಲಿಗರಿಗೆ ಅವಕಾಶ ನೀಡದಿರಲು ಕಾಂಗ್ರೆಸ್ ತೀರ್ಮಾನಿಸಿದೆ.
ಹೀಗಾಗಿ ಶಾಸಕರನ್ನೇ ನಂಬಿಕೊಂಡಿದ್ದ ಬೆಂಬಲಿಗರು ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದಷ್ಟು ಮಂದಿ ರಾಜಕೀಯ ಪರಿಸ್ಥಿತಿ ಅರ್ಥ ಮಾಡಿಕೊಂಡು ಮತ್ತೆ ಪಕ್ಷದ ನಾಯಕರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಲಿದೆ, ನಮಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ತೆರೆಮರೆಯ ಚಟುವಟಿಕೆಗಳನ್ನು ಮುಂದುವರಿಸುತ್ತಲೇ ಇದ್ದಾರೆ.