ದಿಡೀರ್ ಶ್ರೀಮಂತನಾದ ಆಟೋ ಚಾಲಕ-ಮನೆ ಮೇಲೆ ಐಟಿ ದಾಳಿ – ಬೇನಾಮಿ ಆಸ್ತಿಗಳ ಪರಿಶೀಲನೆ

ಬೆಂಗಳೂರು, ಮೇ 1- ಹಲವಾರು ಉದ್ಯಮಿಗಳು, ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಆಟೋ ಚಾಲಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಬೇನಾಮಿ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ವೈಟ್‍ಫೀಲ್ಡ್‍ನ ವಿಲ್ಲಾದಲ್ಲಿ ವಾಸವಿರುವ ಸುಬ್ರಮಣಿ ಎಂಬುವರು ಹೆಸರಿಗೆ ಆಟೋ ಚಾಲಕರಾಗಿದ್ದು, ಪ್ರಭಾವಿ ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಕಳೆದ 2 ದಿನಗಳಿಂದ ಹಿಂದೆ ನಡೆದ ಆದಾಯ ತೆರಿಗೆ ದಾಳಿ ವೇಳೆ ಸಾಕಷ್ಟು ದಾಖಲಾತಿಗಳು ಪತ್ತೆಯಾಗಿದ್ದು, ಉದ್ಯಮಿಗಳು, ರಾಜಕಾರಣಿಗಳ ಬೇನಾಮಿ ಆಸ್ತಿಯ ಜಾಲ ಪತ್ತೆಯಾಗಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು, ಸುಬ್ರಮಣಿ ಅವರ ಹೆಸರಿನಲ್ಲಿ ಬೇನಾಮಿ ಆಸ್ತಿಗಳಿದ್ದರೆ, ಅವರ ಮನೆಯಲ್ಲಿ ಹಣ ಪತ್ತೆಯಾಗಿದ್ದರೆ ಆದಾಯ ತೆರಿಗೆ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಆ ಹಣ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು.ನನ್ನ ಕ್ಷೇತ್ರದಲ್ಲಿ 5.26ಲಕ್ಷ ಮತದಾರರಿದ್ದಾರೆ.ಸುಮಾರು 60 ಸಾವಿರ ಜನ ಕಾರ್ಯಕರ್ತರಿದ್ದಾರೆ. ಸುಬ್ರಮಣಿ ಎಂಬ ಹೆಸರಿನವರೇ ಹಲವಾರು ಮಂದಿ ಇದ್ದಾರೆ. ಆದಾಯ ತೆರಿಗೆ ದಾಳಿಗೆ ತುತ್ತಾಗಿರುವ ಸುಬ್ರಮಣಿಯ ಮುಖ ಪರಿಚಯ ನನಗೆ ಇದ್ದಂತಿಲ್ಲ. ಒಂದು ವೇಳೆ ಕಾರ್ಯಕರ್ತರಾಗಿದ್ದರೂ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದಾಯ ತೆರಿಗೆ ದಾಳಿ ವೇಳೆ ಯಾವುದೇ ವಿಷಯಗಳು ಪತ್ತೆಯಾಗಿದ್ದರೂ ಆ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿ. ಸತ್ಯ ಪತ್ತೆ ಹಚ್ಚಲಿ.ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ