ಬೆಂಗಳೂರು:ಮಾ-23: ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗಾಗಿ ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ನಡೆಯುತ್ತಿದ್ದು, ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಕಾಂಗ್ರೆಸ್ ಶಾಸಕ ಬಾಬು ರಾವ್ ಚಿಂಚನಸೂರ್ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವ ಬದಲು ವಿಪಕ್ಷದ ಅಭ್ಯರ್ಥಿಗೆ ಮತ ಯಾಕಿ ಯಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ವಾಗ್ವಾದ ನಡೆದಿದ್ದು, ಮತದಾನವನ್ನು 15 ನಿಮಿಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಇಬ್ಬರೂ ನಾಯಕರು ಗೊಂದಲಕ್ಕೀಡಾಗಿ ಬೇರೆ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಮತಕೇಂದ್ರದಲ್ಲಿದ್ದ ಪಕ್ಷದ ಏಜೆಂಟ್ಗೆ ಮತಪತ್ರ ತೋರಿಸಿದಾಗ ಯಡವಟ್ಟಾಗಿರುವುದು ತಿಳಿದು ಮತ್ತೆ ಬೇರೆ ಮತ ಪತ್ರದಲ್ಲಿ ಪುನರ್ ಮತ ಚಲಾಯಿಸಿದ್ದಾರೆ.
ಇದಕ್ಕೆ ಬಿಜೆಪಿ ಏಜೆಂಟ್ ಆಗಿದ್ದ ಅರವಿಂದ ಲಿಂಬಾವಳಿ ಮತ್ತು ಜೆಡಿಎಸ್ ಏಜೆಂಟ್ ರಮೇಶ್ ಬಾಬು ಆಕ್ಷೇಪ ವ್ಯಕ್ತಪಡಿಸಿ ಮತ್ತೆ ಮತ್ತೆ ಹೀಗಾಗಲು ಅವಕಾಶ ನೀಡಬಾರದು ಎಂದು ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಜೆಡಿಎಸ್ ನಾಯಕ ಎಚ್.ಡಿ .ಕುಮಾರಸ್ವಾಮಿ ಅವರು ಚುನಾವಣಾಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ನೀವು ಚುನಾವಣಾಧಿಕಾರಿಯಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬೇಡಿ ಎಂದು ಕಿಡಿ ಕಾರಿದ್ದಾರೆ.
ಇನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕ ಸಾಂಭಾಜಿ ಪಾಟೀಲ್ ಪರ ಮತ ಚಲಾಯಿಸಲು ಕಾಂಗ್ರೆಸ್ ಎಂಎಲ್ಸಿ ಲಕ್ಷ್ಮೀ ನಾರಾಯಣ ಅವರು ಬಂದಿದ್ದು ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಏಜೆಂಟರುಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಾಂಭಾಜಿಗೆ ಕೈ ನಡುಗುತ್ತದೆ ಮತ ಚಲಾಯಿಸಲು ಆಗುವುದಿಲ್ಲ ಎಂದಾಗ ವೈದ್ಯರ ಪ್ರಮಾಣ ಪತ್ರ ತಂದು ತೋರಿಸಿ ಬಳಿಕ ನೀವು ಮತ ಚಲಾಯಿಸಿ ಎಂದು ಬಿಜೆಪಿ, ಕಾಂಗ್ರೆಸ್ ಏಜೆಂಟರುಗಳು ತಕರಾರು ತೆಗೆದರು. ಬಳಿಕ ಸಾಂಭಾಜಿ ಅವರೇ ಮತ ಚಲಾಯಿಸಿದ ಘಟನೆ ನಡೆಯಿತು.
rajya sabha election, kagodu timmappa, babu rao chichanasur, voted opponent candidate