ನವದೆಹಲಿ: ಲೋಕಸಭಾ ಚುನಾವಣೆ 2019ರ ನಾಲ್ಕನೇ ಹಂತದ ಮತದಾನ ಸೋಮವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ. ಒಂಬತ್ತು ರಾಜ್ಯಗಳ 71 ಸಂಸತ್ ಸ್ಥಾನಗಳಿಗೆ 961 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಉತ್ತರಪ್ರದೇಶದ ಗೋರಖ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ನಟ ರವಿ ಕಿಶನ್ ಮುಂಬೈನ ಗೋರೆಗಾಂವ್ ನಲ್ಲಿ ಮತ ಚಲಾಯಿಸಿದರು. ನಟಿ ರೇಖಾ ಸಹ ಬಾಂದ್ರಾದಲ್ಲಿ ಮತ ಚಲಾಯಿಸಿದ್ದಾರೆ. ಬಿಹಾರದ ಬೇಗುಸಾರೈಯ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್ ಅವರು ಲಖಿಸಾರೈ ಜಿಲ್ಲೆಯ ಬರಾಹಿಯದ ಮತಗಟ್ಟೆ 33 ರಲ್ಲಿ ಮತ ಚಲಾಯಿಸಿದ್ದಾರೆ. ಬೆಗುಸಾರೈನಲ್ಲಿ, ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ಸ್ಪರ್ಧಿಸಿದ್ದಾರೆ.
ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೇ ಕೂಡ ಝಾಲಾವಡಾದಲ್ಲಿ ಮತ ಚಲಾಯಿಸಿದ್ದಾರೆ.
ಆರ್ ಬಿಐ ಗವರ್ನರ್ ಶಶಿಕಾಂತ್ ದಾಸ್ ಅವರು ಮುಂಬೈನಪೆದ್ದಾರ್ ರಸ್ತೆಯ ಮತಗಟ್ಟೆ ಸಂಖ್ಯೆ 40, 41ರಲ್ಲಿ ಮತಚಲಾಯಿಸಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ಚಿಂದ್ವಾರಾ ಕ್ಷೇತ್ರದ ಶಿಕರ್ಪುರದ ಮತಗಟ್ಟೆ ಸಂಖ್ಯೆ 17ರಲ್ಲಿ ಮತ ಚಲಾಯಿಸಿದರು.
ಉತ್ತರಪ್ರದೇಶದ ಕನೌಜ್ ಕ್ಷೇತ್ರದ ಮತಗಟ್ಟೆ ಸಂಖ್ಯೆ 160, 161ರಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಇನ್ನೂ ಮತದಾನ ಆರಂಭವಾಗಿಲ್ಲ. ಚುನಾವಣಾ ಅಧಿಕಾರಿಗಳು ಇವಿಎಂ ಪರಿಶೀಲನೆ ನಡೆಸುತ್ತಿದ್ದು, ಬಳಿಕ ಮತದಾನ ಪ್ರಕ್ರಿಯೆ ಆರಂಭವಾಗಲಿದೆ.
ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತಎಣಿಕೆ ಮೇ 23ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.