ಬೆಂಗಳೂರು: ಶ್ರೀಲಂಕಾ ಬೆನ್ನಲ್ಲೇ ಉಗ್ರರು ದಕ್ಷಿಣ ಭಾರತದ ಮೇಲೆ ಬಾಂಬ್ ದಾಳಿ ನಡೆಸಬಹುದು ಎಂದು ಹುಸಿ ಕರೆ ಮಾಡಿದ್ದ ಆರೋಪಿಯ ಬಂಧನವಾಗಿದೆ.
ಹುಸಿ ಕರೆ ಮಾಡಿದ್ದ ಸುಂದರಮೂರ್ತಿ ಎಂಬ ವ್ಯಕ್ತಿಯನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬಂಧಿಸಿ ವಿಚಾರಣೆಯೂ ನಡೆಸಲಾಗಿದೆ. ಸದ್ಯ ಆರೋಪಿ ವಿರುದ್ಧ ಕೇಸ್ ದಾಖಲಿಸಿದ್ದು, ಯಾವುದೇ ಉಗ್ರರ ದಾಳಿ ನಡೆಯುವುದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.
ನಗರದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿವೆಂಕಟೇಶ್ವರ ಲೇಔಟ್ ಮನೆಯಲ್ಲಿ ಬಂಧನವಾಗಿದೆ. ಬಂಧಿತ ಆರೋಪಿ ಸುಂದರಮೂರ್ತಿ ಮಾಜಿ ಸೈನಿಕರು ಎಂದು ತಿಳಿದು ಬಂದಿದೆ. ಆರೋಪಿ ಪೊಲೀಸರ ವಿಚಾರಣೆ ವೇಳೆ “ನನ್ನ ಮನಸ್ಸಿಗೆ ಹಾಗೇ ಬಂತು ಕರೆ ಮಾಡಿದೆ. ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಅದೇ ಈ ರೀತಿ ಭಾರತದಲ್ಲೂ ಆಗಬಹುದು ಎಂದು ಊಹಿಸಿ ಕರೆ ಮಾಡಿದೆ ಎಂದಿದ್ದಾರೆ.
ಮೊದಲಿಗೆ ಉಗ್ರರ ದಾಳಿ ಮಾಹಿತಿ ಲಭ್ಯವಾದ ಕೂಡಲೇ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ಅಲ್ಲದೇ ದಕ್ಷಿಣ ಭಾರತದ 8 ರಾಜ್ಯಗಳ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಸಿಕ್ಕ ಮಾಹಿತಿ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನೆರೆಯ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು.
ಶುಕ್ರವಾಗ ಬೆಂಗಳೂರಿನ ಪೊಲೀಸ್ ಕಂಟ್ರೋಲ್ ರೂಂಗೆ ಒಂದು ಕರೆ ಬಂದಿದೆ. ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೋರ್ವ ಉಗ್ರರ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ಧಾರೆ. ಈ ಫೋನ್ ಕರೆ ಆಧರಿಸಿ ನೀಲಮಣಿ ಎನ್.ರಾಜು ಪತ್ರ ಬರೆದಿದ್ದಾರೆ. ಅಲ್ಲದೇ ಎಲ್ಲಾ ರಾಜ್ಯಗಳಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಪತ್ರದಲ್ಲಿ ಉಲ್ಲೇಖ ಮಾಡಿದ್ದರು.
ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಪುದುಚೇರಿ, ಗೋವಾ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದಂತಹ ಪ್ರಮುಖ ನಗರಗಳಲ್ಲಿ ಉಗ್ರರು ದಾಳಿ ನಡೆಸಬಹುದು ಎಂದು ಪತ್ರದಲ್ಲಿ ಬರೆಯಲಾಗಿತ್ತು. ಉಗ್ರರು ಬಹುತೇಕ ರೈಲುಗಳ ಮೇಲೆ ಬಾಂಬ್ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಐಜಿಪಿ ಇಂಟಲಿಜೆನ್ಸ್‌ಗೆ ಮಾಹಿತಿ ಸಿಕ್ಕಿದೆ ಎಂದು ಹೇಳಲಾಗಿತ್ತು.
ಬೆಂಗಳೂರಿನ ಪೊಲೀಸ್ ಕಂಟ್ರೋಲ್ ರೂಂಗೆ ಶುಕ್ರವಾರ ರಾತ್ರಿ ಕರೆ ಮಾಡಿದ್ದ ವ್ಯಕ್ತಿಗಾಗಿ ಶೋಧಕಾರ್ಯ ನಡೆಸಿ ಬಂಧಿಸಲಾಗಿದೆ. ಈ ಹುಸಿ ಕರೆ ಮಾಡಿ ಸುಳ್ಳು ಮಾಹಿತಿ ನೀಡಿದ್ದಾನೆ ವಿಚಾರಣೆ ವೇಳೆ ತಿಳಿದು ಬಂದಿದೆ. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆದೇಶದಂತೆಯೇ ರಾಜ್ಯದಲ್ಲಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಿವೆ ಪೊಲೀಸ್ ಮೂಲಗಳು.