ಬೆಂಗಳೂರು,ಏ.25-ಕಾಂಗ್ರೆಸ್‍ನ ಬಂಡುಕೋರ ಶಾಸಕ ರಮೇಶ್ ಜಾರಕಿಹೊಳಿ ತಮ್ಮೊಂದಿಗೆ ಇನ್ನಷ್ಟು ಶಾಸಕರನ್ನು ಗುಂಪು ಸೇರಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರಯತ್ನಿಸುತ್ತಿದ್ದು, ಸರ್ಕಾರ ಅಸ್ಥಿರಗೊಳಿಸಲು ಹರಸಾಹಸ ನಡೆಸುತ್ತಿದ್ದಾರೆ.
ನಿನ್ನೆ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿರುವ ರಮೇಶ್ ಜಾರಕಿಹೊಳಿ ಕುಮಾರಕೃಪ ಅತಿಥಿ ಗೃಹದ ಸಮೀಪ ಇರುವ ಸಚಿವರ ನಿವಾಸದಲ್ಲಿ ಬೀಡು ಬಿಟ್ಟು ಭಿನ್ನಮತೀಯರ ಸಭೆ ನಡೆಸಲು ಮುಂದಾಗಿದ್ದಾರೆ.
ರಮೇಶ್ ಜಾರಕಿಹೊಳಿ ಆಹ್ವಾನದ ಮೇರೆಗೆ ಬೆಳಗಾವಿಯಿಂದ ಶಾಸಕರಾದ ಸೀಮಂತ ಪಾಟೀಲ್ ಮತ್ತು ಆನಂದ್ ನ್ಯಾಮೇಗೌಡ ಒಂದೇ ವಿಮಾನದಲ್ಲಿ ಆಗಮಿಸಿದ್ದಾರೆ.
ಶಾಸಕರಾದ ಮಹೇಶ್ ಕುಮಟಳ್ಳಿ, ನಾಗೇಂದ್ರ ಅವರು ಕೂಡ ರಮೇಶ್ ಜಾರಕಿಹೊಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ದೋಸ್ತಿ ಸರ್ಕಾರವನ್ನು ಪತನಗೊಳಿಸಲು ಈ ಐದು ಮಂದಿ ಶಾಸಕರ ಸಂಖ್ಯೆ ಸಾಕಾಗುವುದಿಲ್ಲ. ಇನ್ನು ಮೂವರ ಅವಶ್ಯಕತೆ ಇದ್ದು, ಬಿ.ಸಿ.ಪಾಟೀಲ್, ಬಿ.ಕೆ.ಸಂಗಮೇಶ್, ಸುಧಾಕರ್, ಜೆಡಿಎಸ್‍ನ ಶ್ರೀನಿವಾಸ್ ಗೌಡ ಮತ್ತಿತರರನ್ನು ಅತೃಪ್ತರ ಗುಂಪು ಸಂಪರ್ಕಿಸುತ್ತಿದೆ.
ಸಂಪುಟ ಪುನಾರಚನೆಯ ನಂತರ ಕಾಂಗ್ರೆಸ್‍ನಲ್ಲಿ ಹೊಗೆಯಾಡುತ್ತಿರುವ ಬಂಡಾಯದ ಚಟುವಟಿಕೆಗಳು ಬೂದಿಮುಚ್ಚಿದ ಕೆಂಡದಂತಿವೆ. ಕಳೆದ ಜನವರಿ , ಫೆಬ್ರವರಿಯಲ್ಲಿ 4 ಮಂದಿ ಶಾಸಕರು ಮುಂಬೈನ ಹೋಟೆಲ್‍ನಲ್ಲಿ ಬೀಡುಬಿಟ್ಟು, ಸರ್ಕಾರ ಅಸ್ಥಿರಗೊಳಿಸುವ ಗರಿಷ್ಠ ಪ್ರಯತ್ನ ನಡೆಸಿದ್ದರು. ಅದರೆ ಅದಕ್ಕೆ ಕಾಂಗ್ರೆಸ್-ಜೆಡಿಎಸ್ ನಾಯಕರು ಅವಕಾಶ ಕೊಡಲಿಲ್ಲ. ಆ ಪ್ರಯತ್ನಕ್ಕೆ ಬಿಜೆಪಿ ನೇರವಾಗಿ ಕೈ ಜೋಡಿಸಿತ್ತು.ಆದರೆ ದೋಸ್ತಿ ನಾಯಕರುಗಳ ಎಚ್ಚರಿಕೆ ನಡೆಯಿಂದಾಗಿ ಆಪರೇಷನ್ ಕಮಲ ವಿಫಲವಾಗಿತ್ತು.
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ನಾಲ್ಕು ಬಾರಿ ಆಪರೇಷನ್ ಕಮಲದ ಪ್ರಯತ್ನಕ್ಕೆ ಕೈ ಹಾಕಿ ಬಿಜೆಪಿ ವಿಫಲವಾಗಿದೆ. ಈಗ 5ನೇ ಬಾರಿ ಬಿಜೆಪಿ ನೇರವಾಗಿ ಅಖಾಡಕ್ಕೆ ಇಳಿಯದೆ ರಮೇಶ್ ಜಾರಕಿಹೊಳಿ ಮೂಲಕ ಪ್ರಯತ್ನ ಮುಂದುವರೆಸಿದೆ.
ಕಾಂಗ್ರೆಸ್‍ನ ಒಳ ಬೇಗುದಿಗಳಿಂದಲೇ ಸರ್ಕಾರ ಬಿದ್ದು ಹೋಗಲಿದೆ.ನಾವು ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.ಆದರೆ ತೆರೆಮರೆಯಲ್ಲಿ ಕಾಂಗ್ರೆಸ್-ಶಾಸಕರ ನಡುವೆಯೇ ಒಡಕು ಮೂಡಿಸುವ ಪ್ರಯತ್ನ ನಡೆದಿದೆ.
ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಹತ್ತಿಕೊಂಡ ಅಸಮಾಧಾನದ ಕಿಡಿ ತೀವ್ರ ಸ್ವರೂಪಕ್ಕೆ ತಲುಪಿ ಕೊನೆಗೆ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡುವ ಹಂತಕ್ಕೆ ತಲುಪಿತ್ತು.
ರಮೇಶ್ ಜಾರಕಿಹೊಳಿ ಅವರನ್ನು ಹೊರಗಿಟ್ಟು ಸತೀಶ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡಾಗ ಸಹಜವಾಗಿಯೇ ಬಂಡಾಯ ಉಗ್ರ ಸ್ವರೂಪಕ್ಕೆ ತಲುಪಿತ್ತು. ಬೇರೆ ಬೇರೆ ಶಾಸಕರೆಲ್ಲ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದರೂ ಅದ್ಯಾವುದು ಯಶಸ್ವಿಯಾಗಲಿಲ್ಲ.
ಈ ಹಿಂದೆ ಸಿದ್ದರಾಮಯ್ಯ ಹೇಳಿದಂತೆ ಲೋಕಸಭಾ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಎದುರಾಗಿದೆ.ರಮೇಶ್ ಜಾರಕಿಹೊಳಿ ಅವರು ತಾವು ರಾಜೀನಾಮೆ ಕೊಡುವುದು ಖಚಿತ ಎಂದು ಲೋಕಸಭೆ ಚುನಾವಣೆ ದಿನವೇ ಘೊಷಣೆ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟರೆ ಇನ್ನೊಬ್ಬ ಸಹೋದರ ಲಖನ್ ಜಾರಕಿಹೊಳಿಯನ್ನು ಗೋಕಾಕ್ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸುವುದಾಗಿ ಹೇಳಿದ್ದಾರೆ.
ಹೀಗಾಗಿ ಬಂಡಾಯದ ಪ್ರಹಸನ ಸಂಧಾನ ಮಾತುಕತೆಯ ಹಂತವನ್ನೂ ಮೀರಿಹೋಗಿದೆ. ಆದರೂ ಅಂತಿಮ ಪ್ರಯತ್ನವಾಗಿ ರಮೇಶ್ ಜಾರಕಿಹೊಳಿ ಅವರ ಜೊತೆ ಮಾತುಕತೆ ನಡೆಸುವ ಸಂಬಂಧ ಕೆಪಿಸಿಸಿಯಲ್ಲಿ ಇಂದು ಸಭೆ ಸೇರಲಿರುವ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಲಿದ್ದಾರೆ.
ರಮೇಶ್ ಜಾರಕಿಹೊಳಿ ತಾವೊಬ್ಬರೇ ರಾಜೀನಾಮೆ ನೀಡದೆ ಗುಂಪಾಗಿ ರಾಜೀನಾಮೆ ನೀಡುತ್ತೇವೆ ಎಂದು ಹೇಳಿಕೆ ನೀಡಿ ಅದಕ್ಕೆ ಪೂರಕವಾಗಿ ಪಕ್ಷದ ಅತೃಪ್ತರನ್ನು ಸೆಳೆಯುವ ಚಟುವಟಿಕೆಯಲ್ಲಿ ತೊಡಗಿರುವುದು ದೋಸ್ತಿ ಸರ್ಕಾರ ಮತ್ತು ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ.