ಕಾಂಗ್ರೇಸ್ ಮುಖಂಡರು ಹಣ ಮತ್ತು ಹೆಂಡ ಹಂಚುತ್ತಿದ್ದಾರೆ-ಇದಕ್ಕೆ ಪೊಲೀಸ್ ಇಲಾಖೆ ಕುಮ್ಮುಕ್ಕು ನೀಡುತ್ತಿದೆ-ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್

ಬೆಂಗಳೂರು, ಏ.22-ಗುಲ್ಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಬೇಕಾಬಿಟ್ಟಿಯಾಗಿ ಹಣ, ಹೆಂಡ ಹಂಚಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಕೂಡಲೇ ಚುನಾವಣಾ ಆಯೋಗ ಮಧ್ಯೆ ಪ್ರವೇಶಿಸಿ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸಿದೆ.

ತಾವು ಸ್ಪರ್ಧಿಸಿದ ಈವರೆಗಿನ ಚುನಾವಣೆಯಲ್ಲಿ ಇಷ್ಟು ಪ್ರಬಲ ಸ್ಪರ್ಧೆಯನ್ನು ಖರ್ಗೆ ಎಂದಿಗೂ ಎದುರಿಸಿರಲಿಲ್ಲ. ಮ್ಯಾಚ್ ಫಿಕ್ಸಿಂಗ್ ಮೂಲಕ ಒಳ ಒಪ್ಪಂದ ಮಾಡಿಕೊಂಡು ಗೆದ್ದು ಬರುತ್ತಿದ್ದರು. ಈಗ ಅವರಿಗೆ ಸೋಲಿನ ಭೀತಿ ಎದುರಾಗಿದ್ದು, ಮತದಾರರನ್ನು ಭ್ರಷ್ಟರನ್ನಾಗಿ ಮಾಡಲು ಹೊರಟಿದ್ದಾರೆಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಖರ್ಗೆ ಮತ್ತು ಅವರ ಪುತ್ರರು ಹಾಗೂ ಕಾಂಗ್ರೆಸ್‍ನ ಕೆಲ ಮುಖಂಡರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಸಹ ಕುಮ್ಮಕ್ಕು ನೀಡುತ್ತಿದೆ.ಚುನಾವಣಾ ಆಯೋಗ ಕೂಡಲೇ ಇತ್ತ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ಗುಲ್ಬರ್ಗಾದ ಕಮಲಪುರ, ವಾಡಿ ಮತ್ತು ಚಿತ್ತಾಪುರದ ಪೊಲೀಸರು ಇಂತಹವರ ಬೆಂಗಾವಲಿಗೆ ನಿಂತಿದ್ದಾರೆ.

ಪೊಲೀಸ್ ವಾಹನಗಳಲ್ಲೇ ರಾಜಾರೋಷವಾಗಿ ಹಣ ಸಾಗಿಸುತ್ತಿದ್ದಾರೆ.ಪ್ರತಿ ಬೂತ್‍ಗೆ 1 ಲಕ್ಷದಿಂದ 5 ಲಕ್ಷದವರೆಗೂ ಹಣ ಹಾಕಿಸಿದ್ದಾರೆ.ಸುಮಾರು 100 ಕೋಟಿಯಷ್ಟು ಹಣ ಹಂಚಿಕೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಖರ್ಗೆಯವರು ಎಷ್ಟೇ ಹಣ, ಹೆಂಡದ ಹೊಳೆ ಹರಿಸಿದರೂ ಸೋಲು ಈ ಬಾರಿ ಕಟ್ಟಿಟ್ಟ ಬುತ್ತಿ.ಮತದಾರರನ್ನು ಹಣದಿಂದಲೇ ಖರೀದಿಸಲು ಹೊರಟಿರುವ ಅವರಿಗೆ ಗುಲ್ಬರ್ಗಾ ಜನತೆ ತಕ್ಕ ಪಾಠ ಕಲಿಸುವುದು ಖಚಿತ ಎಂದು ಹೇಳಿದರು.

ಗುಲ್ಬರ್ಗಾ ಜಿಲ್ಲೆಯಲ್ಲಿರುವ ಕೋಲಿ ಸಮುದಾಯ, ಬೀದರ್‍ನಲ್ಲಿರುವ ಕುರುಬ ಸಮುದಾಯದ ಉಪ ಪಂಗಡ ಗೊಂಡರನ್ನು ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾದ 2 ತಿಂಗಳಲ್ಲಿ ಎಸ್‍ಟಿಗೆ ಸೇರ್ಪಡೆ ಮಾಡಿರುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಸ್ಪಷ್ಟಪಡಿಸಿದರು.

ನಾನು ಬಿಜೆಪಿಯವರ ದುಡ್ಡು ತಿಂದಿದ್ದೇನೆಯೇ ಎಂದು ಖರ್ಗೆ ಪ್ರಶ್ನಿಸುತ್ತಾರೆ. ಇನ್ನೊಂದೆಡೆ ಪ್ರಿಯಾಂಕ ಖರ್ಗೆ, ನರೇಂದ್ರ ಮೋದಿ ನನ್ನ ಪಾದ ತೊಳೆದು ನೀರು ಕುಡಿಯಲಿ ಎನ್ನುತ್ತಾರೆ.ಖರ್ಗೆಯವರು ಗುಲ್ಬರ್ಗಾ ಜನತೆಯ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ಮಾತಿಗೆ ಜನತೆ ನಾಳೆ ಉತ್ತರ ಕೊಡಲಿದ್ದಾರೆ. ಇದನ್ನು ಕಾದು ನೋಡಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ