ಇ-ಆಧಾರ್ ಜಾರಿಗೆ ಬಂದಿರುವುದರಿಂದ ಬ್ಯಾಂಕಿಂಗ್ ಕೆಲಸಗಳು ಸುಲುಭವಾಗಿದೆ-ನಂದನ್ ನಿಲೇಕಣಿ

ಬೆಂಗಳೂರು, ಏ.22-ಭಾರತದಲ್ಲಿ ಈವರೆಗೂ 1.2 ಬಿಲಿಯನ್ ಮಂದಿಗೆ ಆಧಾರ್ ಕಾರ್ಡ್ ಮಾಡಿಕೊಡಲಾಗಿದೆ.ಈಗ ಹೊಸದಾಗಿ ಇ-ಆಧಾರ್ ಜಾರಿಗೆ ಬಂದಿರುವುದರಿಂದ ಬ್ಯಾಂಕಿಂಗ್ ಕೆಲಸಗಳು ಸುಲಭವಾಗಿದೆ ಎಂದು ಇನ್ಫೋಸಿಸ್ ಟೆಕ್ನಾಲಜೀಸ್‍ನ ಅಧ್ಯಕ್ಷರಾದ ನಂದನ್ ನಿಲೇಕಣಿ ತಿಳಿಸಿದರು.

ಖಾಸಗಿ ಹೊಟೇಲ್‍ನಲ್ಲಿಂದು ಎಫ್‍ಐಸಿಸಿಐ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಮೊದಲು ಕಾಗದದ ರೂಪದಲ್ಲಿದ್ದ ಆಧಾರ್ ಕಾರ್ಡ್ ಇಕೆವೈಸಿ ಆಗಿದೆ.ಇದನ್ನು ಬಳಸುವುದರಿಂದ ಬ್ಯಾಂಕಿಂಗ್ ಕೆಲಸಗಳು ಸುಲಭವಾಗಲಿದೆ. ಸುಮಾರು ಒಂದು ಬಿಲಿಯನ್ ಬ್ಯಾಂಕ್ ಖಾತೆಗಳ ಪೈಕಿ 600 ಮಿಲಿಯನ್ ಬ್ಯಾಂಕ್‍ಗಳು ಆಧಾರ್‍ಲಿಂಕ್ ಮಾಡಿವೆ. ಇದರಿಂದ ಪಿಂಚಣಿ ಮತ್ತಿತರ ಮಾಸಾಶನ ಪಡೆಯುವವರಿಗೆ ಸುಲಭವಾಗಿದೆ. ಡಿಜಿಟಲ್ ಸಿಗ್ನೇಚರ್ ಕೂಡ ಲಭ್ಯವಿದೆ ಎಂದು ಹೇಳಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ 6 ಸಾವಿರ ರೂ. ಬ್ಯಾಂಕ್ ಖಾತೆಗೆ ಹಾಕಲು ಇ-ಆಧಾರ್ ಬಳಸಲಾಗುತ್ತಿದೆ.ನೇರ ನಗದು ವರ್ಗಾವಣೆ ಯೋಜನೆಗೂ ಇದು ಒಳಿತಾಗಿದೆ ಎಂದರು.

ನೋಟು ಅಮಾನೀಕರಣ ನಂತರ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ಸಿಗುತ್ತಿದೆ. ನೋಟು ಅಮಾನೀಕರಣದ ಹಿಂದಿನ ತಿಂಗಳು ನೂರು ಸಾವಿರ ನಗದು ರಹಿತ ಹಣದ ವ್ಯವಹಾರ ನಡೆದಿತ್ತು. ಆದರೆ ಕಳೆದ ತಿಂಗಳು 800 ಮಿಲಿಯನ್ ನಗದು ರಹಿತ ಹಣದ ವ್ಯವಹಾರವಾಗಿದೆ. ಇದು ಅತಿವೇಗವಾಗಿ ಬೆಳೆಯುತ್ತಿದೆ.ನಗದು ರಹಿತ ವ್ಯವಹಾರದಲ್ಲಿ ಹಲವು ಕಂಪನಿಗಳು ಕೆಲಸ ಮಾಡುತ್ತಿವೆ. ಡೀಮ್ ಆ್ಯಪ್, ಯುಪಿಐ ಸೇರಿದಂತೆ ಹಲವು ಸೌಲಭ್ಯಗಳು ಸಿಗುತ್ತಿವೆ ಎಂದರು.

ಟೋಲ್‍ಸಂಗ್ರಹ ಕೇಂದ್ರಗಳಲ್ಲಿ ಡಿಜಿಟಲ್ ಪಾಸ್‍ಗಳ ಮೂಲಕ ಫಾಸ್ಟ್ ಮೂವಿಂಗ್ ಟ್ರ್ಯಾಕ್ ಆರಂಭಗೊಂಡಿದೆ. ಇದರಿಂದ ಟೋಲ್‍ನಲ್ಲಿ ಹಣ ಕಟ್ಟಲು ಸಮಯ ವ್ಯರ್ಥವಾಗುವುದು ತಪ್ಪಿದಂತಾಗಿದೆ.

ವಾಹನಗಳಿಗೆ ಪ್ರತ್ಯೇಕವಾದ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಇದೇ ಸಂಖ್ಯೆಯನ್ನು ಬಳಸಿ ಪಾರ್ಕಿಂಗ್ ಜಾಗ ಸೇರಿದಂತೆ ಇತರೆ ಸೌಲಭ್ಯಗಳಿಗೂ ಉಪಯೋಗಿಸಬಹುದು.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಮಾತನಾಡಿ, ದೇಶದಲ್ಲಿ ಜೈವಿಕ ಆರ್ಥಿಕ ವಹಿವಾಟು 50 ಬಿಲಿಯನ್ ಡಾಲರ್ ಇದೆ. 2025ರ ವೇಳೆಗೆ ಇದು 100 ಬಿಲಿಯನ್ ಡಾರ್ ಆಗುತ್ತದೆ. 2030ರ ವೇಳೆಗೆ ಇದನ್ನು 300 ಬಿಲಿಯನ್ ಡಾಲರ್‍ಗೆ ಹೆಚ್ಚಿಸುವ ಗುರಿ ಇದೆ ಎಂದು ಹೇಳಿದರು.

ಮೇಕ್ ಇನ್ ಇಂಡಿಯಾ ನಂತರ ದೇಶದಲ್ಲಿ ಆರ್ಥಿಕ ವಲಯ ಬಹಳಷ್ಟು ಚೇತರಿಸಿದೆ. ವಿಶ್ವದಲ್ಲಿ ಹಾಕಲ್ಪಡುವ ವ್ಯಾಕ್ಸಿನೇಷನ್‍ಗಳಲ್ಲಿ ಒಂದೆರಡು ನಮ್ಮ ದೇಶದಲ್ಲೇ ತಯಾರಾಗುವಂತಹುದು ಎಂದು ತಿಳಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಹತ್ತಿಯನ್ನು ಮೊದಲು ಆಮದು ಮಾಡುತ್ತಿದ್ದೆವು.ಈಗ ಈ ಹತ್ತಿಯನ್ನು ರಫ್ತು ಮಾಡುವುದರಲ್ಲಿ ದೇಶ ನಂಬರ್ .1 ಸ್ಥಾನದಲ್ಲಿದೆ ಎಂದರು.

ಉತ್ಪಾದನೆಗೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುವುದಕ್ಕೆ ನಮ್ಮಲ್ಲಿ ಮಾನವ ಸಂಪನ್ಮೂಲ ನಮ್ಮಲ್ಲಿ ಬೇಕಾದಷ್ಟಿದೆ. ಆದರೆ ಸಂಶೋಧನೆ ಕೊರತೆ ಕಾಣುತ್ತಿದೆ.ಇನ್ನೂ ಹೆಚ್ಚು ಸಂಶೋಧನೆ ಆಗಬೇಕು. ಬಜೆಟ್‍ನಲ್ಲಿ 0.8ರಷ್ಟು ಮಾತ್ರ ಸಂಶೋಧನೆಗೆ ಖರ್ಚು ಮಾಡಲಾಗುತ್ತಿದೆ. ಶೇ.2ರಷ್ಟು ಸಂಶೋಧನೆಗೆ ಖರ್ಚು ಮಾಡಿದರೆ ನಾವು ಅದ್ಭುತ ಸೃಷ್ಟಿಸಬಹುದು ಎಂದು ಹೇಳಿದರು.

ಬಿ.ಟಿ. ಹತ್ತಿ ವಿಷಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸೂಕ್ತ ಮಾಹಿತಿ ಒದಗಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಹಿಂದೆ ಹೈಬ್ರೀಡ್ ತಳಿಗಳು ಬಂದಾಗಲೂ ಪ್ರತಿಭಟನೆಗಳಾಗಿದ್ದವು. ಬಿ.ಟಿ. ಹತ್ತಿ ಬಗ್ಗೆ ಇರುವ ಗೊಂದಲಗಳನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.

ಸೂಕ್ಷ್ಮ ವಿಚಾರವಾಗಿರುವುದರಿಂದ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾತನಾಡಿ, ಭದ್ರತೆ ಮತ್ತು ಉದ್ಯಮದ ನಡುವೆ ನೇರ ಸಂಪರ್ಕವಿದೆ. ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟವಾಗಿದೆ.

ಬಾಂಬ್ ಸ್ಫೋಟ ಮಾಡಲು ದುಷ್ಕರ್ಮಿಗಳು 5 ಸಾವಿರದಿಂದ 10 ಸಾವಿರ ಡಾಲರ್ ಖರ್ಚು ಮಾಡಿರಬಹುದು. ಆದರೆ ಸ್ಫೋಟದ ನಂತರ ಆಗುವ ಆರ್ಥಿಕ ನಷ್ಟ ಲಕ್ಷಾಂತರ ಡಾಲರ್‍ಗಳ ಪ್ರಮಾಣದಲ್ಲಿರುತ್ತದೆ ಎಂದು ವಿಷಾದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ