ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈಡನ್ ಗಾರ್ಡನ್ನಲ್ಲಿ ಕೋಲ್ಕತಾ ನೈಟ್ರೈಡರ್ಸ್ ತಂಡದ ಎದುರು ಗೆಲುವು ದಾಖಲಿಸಿದೆ. ಆರ್ಸಿಬಿ ಆಡಿರುವ 9 ಪಂದ್ಯಗಳ ಪೈಕಿ, ಎರಡರಲ್ಲಿ ಗೆಲುವು ದಾಖಲಿಸಿದಂತಾಗಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ, ಕೆಕೆಆರ್ ಬೌಲರ್ಗಳನ್ನು ಬೆಂಡೆತ್ತಿ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಶತಕ, ತಂಡದ ಮೊತ್ತವನ್ನು 200ರ ಗಡಿ ದಾಟುವಂತೆ ಮಾಡಿತ್ತು. ಮೊಯಿನ್ ಅಲಿ 28 ಬಾಲ್ಗಳಿಗೆ 66 ರನ್ಗಳ ಅರ್ಧ ಶತಕದ ನೆರವು ಕೂಡ ಆರ್ಸಿಬಿ ಕೆಕೆಆರ್ಗೆ ಬಿಗ್ ಟಾರ್ಗೆಟ್ ನೀಡಲು ಸಹಕಾರಿಯಾಯ್ತು.
ಆರ್ಸಿಬಿ ನೀಡಿದ ಗುರಿಯನ್ನು ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್, ಆರಂಭದಲ್ಲೇ ವಿಕೆಟ್ ಕಳೆದುಕೊಂಡು ರನ್ ಗಳಿಸಲು ಒದ್ದಾಡುತ್ತಿತ್ತು. ಡೇಲ್ ಸ್ಟೇನ್ ದಾಳಿಗೆ ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್ ಲಿನ್, 1 ರನ್ ಗಳಿಸಿ ಕೊಹ್ಲಿ ಕೈಗೆ ಕ್ಯಾಚಿತ್ತರು. ನಂತರ ಬಂದ ಸುನಿಲ್ ನರೈನ್ ಕೂಡಾ 18 ರನ್ ಗಳಿಸುವಷ್ಟರಲ್ಲಿ ಔಟ್ ಆದ್ರು. ರಾಬಿನ್ ಉತ್ತಪ್ಪ ಕೂಡಾ ಅಂಗಳದಲ್ಲಿ ರನ್ ಗಳಿಸಲು ಒದ್ದಾಡಿ 9 ರನ್ಗಳಿಗೆ ಕ್ಯಾಚಿತ್ತು ಹೋದ್ರು. ನಿತೀಶ್ ರಾಣಾ ಹೋರಾಟದಿಂದ ಗೆಲುವಿನೆಡೆ ಸಾಗುತ್ತಿದ್ದಾಗ ಅವರಿಗೆ ಜೊತೆಯಾದ ಆ್ಯಂಡ್ರೆ ರಸೆಲ್ ಪಂದ್ಯವನ್ನು ತಮ್ಮೆಡೆಗೆ ತಿರುಗಿಸಿಕೊಳ್ಳುವ ಎಲ್ಲಾ ಸೂಚನೆ ನೀಡಿದ್ರು. ನಿತೀಶ್ ರಾಣಾ ಅಜೇಯರಾಗಿ 46 ಬಾಲ್ಗಳಲ್ಲಿ 85 ರನ್ ಸಿಡಿಸಿದ್ರೆ, ರಸೆಲ್ 9 ಸಿಕ್ಸರ್, 2 ಬೌಂಡರಿಗಳ ಅಬ್ಬರದ ಬ್ಯಾಟಿಂಗ್ ಮೂಲಕ 65 (25) ರನ್ ಗಳಿಸಿದ್ರು.ಅಷ್ಟರಲ್ಲಿ ಅಂತಿಮ ಓವರ್ ಮುಗಿದಿದ್ದರಿಂದ ಆರ್ಸಿಬಿ 10 ರನ್ಗಳಿಂದ ಗೆಲುವಿನ ನಗೆ ಬೀರುವಂತಾಯ್ತು. ಇನ್ನು ಅಂತಿಮ ಓವರ್ಗಳಲ್ಲಿ ಸ್ಟಾಯಿನಿಸ್ ಮತ್ತು ಮೊಯೀನ್ ಅಲಿ ಕೆಕೆಆರ್ನ ಆರ್ಭಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದು ಗೆಲುವಿಗೆ ಸಹಕಾರಿಯಯ್ತು.