ಕಣ್ಣೀರು ಸುರಿಸುವುದರಿಂದ ರಾಜ್ಯ ಉದ್ಧಾರವಾಗಲ್ಲ; ಬಿ.ಎಲ್​. ಸಂತೋಷ ಲೇವಡಿ

ಕೊಪ್ಪಳರಾಜ್ಯದಲ್ಲಿ ಅಪ್ಪ ಮಕ್ಕಳು ಒಟ್ಟಾಗಿ ಕಣ್ಣೀರು ಸುರಿಸುವುದರಿಂದ ರಾಜ್ಯ ಉದ್ದಾರವಾಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಜೆಡಿಎಸ್ ಕುಟುಂಬ ರಾಜಕಾರಣವನ್ನು ಲೇವಡಿ ಮಾಡಿದ್ದಾರೆ.

ಕೊಪ್ಪಳದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಇಡೀ ಜೆಡಿಎಸ್ ಕುಟುಂಬ ಹೋದಲ್ಲಿ ಬಂದಲ್ಲೆಲ್ಲ ಕಣ್ಣೀರು ಹಾಕುತ್ತಿದೆ. ಆದರೆ, ಇವರು ಕಣ್ಣೀರು ಹಾಕುವುದರಿಂದ ರಾಜ್ಯದ ಅಭಿವೃದ್ಧಿಯಾಗಲ್ಲ”  ಎಂದು ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ್ದಾರೆ.

“ರಾಜ್ಯದಲ್ಲಿ ಮೈತ್ರಿ ಸರಕಾರ ಪ್ರತಿ ಮತಕ್ಕೆ ಎರಡು ಸಾವಿರ ರೂಪಾಯಿ ನೀಡಿ ಮತಗಳನ್ನು ಖರೀದಿಸುವ ಹುನ್ನಾರ ನಡೆಸುತ್ತಿದೆ. ಆದರೆ, ದೇಶದ ಜನ ಮತ್ತೊಮ್ಮೆ ನರೇಂದ್ರ ಮೋದಿಯನ್ನೇ ಪ್ರಧಾನಿಯಾಗಿ ಒಪ್ಕೊಳ್ತಾರೆಯೇ ವಿನಃ ರಾಹುಲ್ ಗಾಂಧಿಯನ್ನಲ್ಲ. ಹೀಗಾಗಿ ಮೈತ್ರಿ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿ” ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ಈ ಚುನಾವಣೆಯಲ್ಲಿ ಕೊಪ್ಪಳದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಕನಿಷ್ಟ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ