ತ್ರಿಪುರಾ ಪೂರ್ವ ಲೋಕಸಭಾ ಚುನಾವಣೆ ಮುಂದೂಡಿದ ಚುನಾವಣಾ ಆಯೋಗ

ನವದೆಹಲಿ, ಏ.17-ನಿನ್ನೆಯಷ್ಟೆ ತಮಿಳುನಾಡಿನ ವೆಲ್ಲೂರಿನ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಿರುವ ಆಯೋಗ ಇಂದು ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಕೂಡ ಮುಂದೂಡಿಕೆ ಮಾಡಿದೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ನಾಳೆ ನಡೆಯಬೇಕಿದ್ದ ಲೋಕಸಭಾ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಏ.23ಕ್ಕೆ ಮರು ನಿಗದಿ ಮಾಡಲಾಗಿದೆ.

ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತ್ರಿಪುರಾ ರಾಜ್ಯದಲ್ಲಿ ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರಕ್ಕೆ ಏ.11 ರಂದು ಚುನಾವಣೆ ನಡೆದಿತ್ತು. ಆ ವೇಳೆ ಶಾಂತಿಯುತ ಮತ್ತು ನಿರ್ಭೀತ ಚುನಾವಣೆ ನಡೆದಿಲ್ಲ ಎಂದು ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಆಯೋಗಕ್ಕೆ ದೂರು ನೀಡಿದ್ದಲ್ಲದೆ, 460 ಮತಗಟ್ಟೆಗಳಲ್ಲಿ ರಿಗ್ಗಿಂಗ್ ನಡೆದಿದ್ದು, ಇಷ್ಟು ಕ್ಷೇತ್ರಗಳಿಗೆ ಮರು ಚುನಾವಣೆ ನಡೆಸಬೇಕೆಂದು ಆಯೋಗಕ್ಕೆ ಒತ್ತಾಯಿಸಿದವು.

ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಇದೇ ರೀತಿಯ ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಚುನಾವಣೆ ನಡೆಸಬಾರದು ಎಂದು ಒತ್ತಾಯಿಸಿದವು.

ಜೊತೆಗೆ ತ್ರಿಪುರಾ ರಾಜ್ಯ ಮುಖ್ಯ ಚುನಾವಣಾಧಿಕಾರಿ ಶ್ರೀರಾಮ್ ತರನಿಕಾಂತಿ ಅವರು ಚುನಾವಣೆಗೆ ಸೂಕ್ತ ವಾತಾವರಣ ಇಲ್ಲ. ಕಾನೂನು ಬಾಹಿರ ಶಕ್ತಿಗಳು ಚುನಾವಣಾ ಪ್ರಕ್ರಿಯೆಗೆ ತಡೆಯೊಡ್ಡುವ ಸಾಧ್ಯತೆ ಇದೆ ಎಂದು ವರದಿ ನೀಡಿದರು.

ಗುಪ್ತಚರ ವರದಿ ಪ್ರಕಾರ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಲ್ಲದೆ, ಕೇಂದ್ರದಿಂದ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡುವಂತೆ ಸಲಹೆ ನೀಡಿತ್ತು. ಈ ಎಲ್ಲ ಹಿನ್ನೆಲೆಯನ್ನು ಆಧರಿಸಿ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿದೆ.

ಆಯೋಗದ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಸ್ವಾಗತಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ