ಬಂಡಾಯ ನಡೆಸಿದವರನ್ನು ಪಕ್ಷದಿಂದ ಹೊರಹಾಕಲು ಮುಂದಾದ ಕಾಂಗ್ರೇಸ್

ಬೆಂಗಳೂರು, ಏ.17- ಮೊದಲ ಹಂತದ ಚುನಾವಣೆ ಪ್ರಚಾರದ ಭರಾಟೆ ಮುಗಿದ ಬೆನ್ನಲೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ಬಿಸಿ ಮುಟ್ಟಿಸಿಲು ಕಾಂಗ್ರೆಸ್ ತೊಡಗಿದ್ದು, ಬಂಡಾಯ ಚಟುವಟಿಕೆ ನಡೆಸಿದವರನ್ನು ಪಕ್ಷದಿಂದ ಹೊರಹಾಕಲು ಮುಂದಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ವಿರುದ್ಧವಾಗಿ ಸುಮಾರು 200ಕ್ಕೂ ಹೆಚ್ಚು ಮಂದಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದನ್ನು ಪಟ್ಟಿ ಮಾಡಲಾಗಿದೆ.ಕೆಳಹಂತದಿಂದ ರಾಜ್ಯ ನಾಯಕರ ವರೆಗೂ ಹಲವಾರು ಮಂದಿ ಬಂಡಾಯ ಚಟುವಟಿಕೆಯಲ್ಲಿ ಭಾಗಿಯಾಗಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ವಿರುದ್ಧವಾಗಿ ಚುನಾವಣಾ ಪ್ರಚಾರ ನಡೆಸಿರುವುದು ಕೆಪಿಸಿಸಿಗೆ ನುಂಗಲಾರದ ತುತ್ತಾಗಿದೆ.

ಹಲವಾರು ಬಾರಿ ಎಚ್ಚರಿಕೆ ನೀಡಿ, ಸಂಧಾನ ಸಭೆ ನಡೆಸಿದರು ಕೆಲವರು ತಮ್ಮ ಹಠ ಬಿಡದೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಅದರಲ್ಲೂ ಹಾಸನ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಈ ರೀತಿಯ ಚಟುವಟಿಕೆಗಳು ಹೆಚ್ಚಾಗಿದ್ದವು.

ಜಿಲ್ಲಾ ಕಾಂಗ್ರೆಸ್ ಕ್ರಮ ಕೈಗೊಳ್ಳಬಹುದಾದ ಕೆಳಹಂತದ ನಾಯಕರ ಹೆಸರನ್ನು ಸ್ಥಳೀಯವಾಗಿಯೇ ಸಿದ್ಧ ಪಡಿಸಲಾಗಿದ್ದು, ಅವರ ವಿರುದ್ಧ ಜಿಲ್ಲಾ ಸಮಿತಿಯೆ ಕ್ರಮ ಕೈಗೊಳ್ಳಲಿದೆ. ರಾಜ್ಯಮಟ್ಟದ ಸಮಿತಿ ಕ್ರಮ ಜರುಗಿಸಬೇಕಾದ 200ಮಂದಿ ಹೆಸರು ಕೆಪಿಸಿಸಿಗೆ ವರದಿಯಾಗಿದೆ.ಅದರಲ್ಲೂ ಕೆಲವರ ವಿರುದ್ಧ ಎಐಸಿಸಿಯೇ ಕ್ರಮ ಕೈಗೊಳ್ಳಬೇಕಿದ್ದು ಅಂತಹವರ ಪಟ್ಟಿ ಕೂಡ ಸಿದ್ದವಾಗಿದ್ದು, ಶೀಘ್ರವೇ ದೆಹಲಿಗೆ ರವಾನೆಯಾಗಲಿದೆ.ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಮುಂದೆ ಬಂಡಾಯಗಾರರ ವಿರುದ್ಧದ ವರದಿಯನ್ನು ಮಂಡಿಸಲಾಗುತ್ತಿದ್ದು, ಪರಿಶೀಲನೆ ಮಾಡಿ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ.

ಎರಡನೇ ಹಂತದ ಚುನಾವಣೆ ಮುಗಿದ ಬಳಿಕ ಶಿಸ್ತು ಪಾಲನಾ ಸಮಿತಿ ಸಭೆ ನಡೆಸಲಿದ್ದು, ಬಂಡಾಯಗಾರರಿಗೆ ಚಾಟಿ ಬೀಸುವುದು ಖಚಿತವಾಗಿದೆ. ಇನ್ನು ಕೆಲವು ನಾಯಕರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸದೆ, ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡದೆ, ತಮ್ಮ ಪಾಡಿಗೆ ತಾವು ತಟಸ್ಥವಾಗಿ ಉಳಿದು ಬಿಟ್ಟಿದ್ದಾರೆ.

ಅಂತಹರ ಪಟ್ಟಿಯೂ ಸಿದ್ಧಗೊಂಡಿದೆ.ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲಿರುವವರೆಗೂ ಆ ನಾಯಕರಿಗೆ ಯಾವುದೇ ರೀತಿಯ ಅಧಿಕಾರ, ಅವಕಾಶ ನೀಡಿದಿರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಮುಂದಿನ ಚುನಾವಣೆಯಲ್ಲೂ ಈ ನಾಯಕರುಗಳಿಗೆ ಮಣೆ ಹಾಕದೆ ಮೂಲೆಗುಂಪು ಮಾಡುವ ಮಾತುಗಳು ಕೇಳಿ ಬಂದಿವೆ.

ರಾಷ್ಟ್ರ ರಾಜಕಾರಣದ ಹಿತದೃಷಿಯಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೆಡಿಎಸ್ ಜತೆ ಚುನಾವಣಾ ಪೂರ್ಣ ಮೈತ್ರಿ ಮಾಡಿಕೊಂಡಿದ್ದು, ಎರಡು ಪಕ್ಷಗಳ ನಾಯಕರು ಒಟ್ಟಾಗಿ ಜಂಟಿ ಚುನಾವಣಾ ಪ್ರಚಾರ ನಡೆಸಿದರು. ರಾಜ್ಯ ನಾಯಕರುಗಳು ಒಂದಾದರೂ ಸ್ಥಳೀಯ ಮಟ್ಟದಲ್ಲಿ ನಾಯಕರಗಳು ಒಂದಾಗಿಲ್ಲ. ಕೆಲವು ಪ್ರಮುಖ ನಾಯಕರು ಕೂಡ ಮೈತ್ರಿಗೆ ವಿರುದ್ಧವಾಗಿಯೇ ನಡೆದುಕೊಂಡಿದ್ದಾರೆ.

ಹೀಗಾಗಿ ಅಂತಹ ನಾಯಕರಗಳನ್ನು ದಂಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಪಕ್ಷದ ಶಿಸ್ತು ಉಲ್ಲಂಘನೆಯಾಗಲಿದೆ ಎಂಬ ಕಾರಣಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಬಗ್ಗೆ ಹಗುರವಾದ ಭಾವನೆಯಿದೆ. ಅಂತಹವರಿಗೆ ಸರಿಯಾಗಿ ಬಿಸಿ ಮುಟ್ಟಿಸಿ ಅಧ್ಯಕ್ಷರ ಹುದ್ದೆಯ ಗತ್ತನ್ನು ತೋರಿಸಲು ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ