ಅಹಮದಾಬಾದ್, ಏ.17-ಗುಜರಾತ್, ರಾಜಸ್ತಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಗೆ ಕನಿಷ್ಠ 47 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ವರುಣಾಘಾತದಲ್ಲಿ ಕೆಲವರು ಕಣ್ಮರೆಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಗುಜರಾತ್ನ ಹಲವು ಭಾಗಗಳಲ್ಲಿ ಅಕಾಲಿಕ ಮಳೆ ಮತ್ತು ಧೂಳು ಬಿರುಗಾಳಿಗೆ ಕನಿಷ್ಠ 12 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.
ಹಠಾತ್ ನೈಸರ್ಗಿಕ ವಿಕೋಪದಿಂದ ಸಾವು-ನೋವು ಸಂಭವಿಸಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಸಂತ್ರಸ್ತ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಗಳ ಪರಿಹಾರ ಪ್ರಕಟಿಸಿದ್ದಾರೆ. ಸಂತ್ರಸ್ತರಿಗೆ ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಅವರು ತಿಳಿಸಿದ್ದಾರೆ.
ಉತ್ತರ ಗುಜರಾತ್ ಮತ್ತು ಸೌರಾಷ್ಟ್ರ ಪ್ರಾಂತ್ಯದ ಜಿಲ್ಲೆಗಳೂ ಸೇರಿದಂತೆ ವಿವಿಧ ಪ್ರದೇಶಗಳು ಮಳೆ ಮತ್ತು ಧೂಳು ಬಿರುಗಾಳಿಯಿಂದ ತತ್ತರಿಸಿವೆ.
ರಾಜ್ಯದ ವಿವಿಧ ಜಿಲ್ಲೆಗಳ ಪ್ರಾಥಮಿಕ ವರದಿ ಪ್ರಕಾರ, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರದ ಪರಿಹಾರ ಘಟಕದ ನಿರ್ದೇಶಕ ಜಿ.ಬಿ. ಮಂಗಲ್ಪಾರಾ ತಿಳಿಸಿದ್ದಾರೆ.
ಭಾರೀ ಮಳೆ-ಬಿರುಗಾಳಿಯಿಂದ ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ. ಕೆಲವರು ಕಣ್ಮರೆಯಾಗಿರುವುದರಿಂದ ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.
ರಾಜಸ್ತಾನದಲ್ಲಿ 10 ಮಂದಿ ಬಲಿ :
ರಾಜಸ್ತಾನದ ಹಲವು ಭಾಗಗಳಲ್ಲೂ ಭಾರೀ ಮಳೆ, ಧೂಳು ಮತ್ತು ಬಿರುಗಾಳಿಗೆ ಕನಿಷ್ಠ 10 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.
ಜೈಪುರ, ಬರಾನ್ ಮತ್ತು ಉದಯ್ಪುರ್ ಜಿಲ್ಲೆಗಳಲ್ಲಿ ಮಳೆ, ಧೂಳು ಮತ್ತು ಬಿರುಗಾಳಿಗೆ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಮೃತರ ಹತ್ತಿರದ ಸಂಬಂಧಿಕರಿಗೆ ತಲಾ 4 ಲಕ್ಷ ರೂ.ಗಳ ಪರಿಹಾರ ಘೋಷಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಖರ್ಗೋನ್ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಗೆ 14 ಮಂದಿ ಬಲಿಯಾಗಿದ್ದಾರೆ. ಖರ್ಗೊನ್, ಉಪಾದಿ, ಬಾಡಾ, ಪ್ರೇಮ್ನಗರ್ ಗ್ರಾಮಗಳಲ್ಲಿ ಸಾವು ನೋವು ಸಂಭವಿಸಿದೆ. ಮಳೆಯಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ರೈಲು ಸಂಚಾರ ಅಸ್ತವ್ಯಸ್ತವಾಗಿದೆ.
ಮಹಾರಾಷ್ಟ್ರದ ನಾಸಿಕ್ ಮತ್ತು ಪುಣೆ ಜಿಲ್ಲೆಯ ವಿವಿಧೆಡೆ ಆಲಿ ಕಲ್ಲಿನೊಂದಿಗೆ ವರುಣನ ಆರ್ಭಟಕ್ಕೆ 11 ಮಂದಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.