ಬೆಂಗಳೂರು,ಏ.11- ಲೋಕಸಭಾ ಚುನಾವಣಾ ಹೊಸ್ತಿನಲ್ಲಿನಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಆಪ್ತರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತಿವೆ ಎಂಬ ಆರೋಪಗಳ ನಡುವೆಯೇ ಇಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ಬೆಂಬಲಿಗರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಮುಂಜಾನೆ 6 ಗಂಟೆಯಿಂದಲೂ ಸುಮಾರು 100ಕ್ಕೂ ಹೆಚ್ಚು ಐಟಿ ಅಧಿಕಾರಿಗಳು 20 ಕಡೆಗಳಲ್ಲಿ ದಾಳಿ ನಡೆಸಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ನಯಿಜ್ ಖಾನ್, ಅರಮನೆ ಮೈದಾನದಲ್ಲಿ ಹೂವಿನ ಅಲಂಕಾರ ಮಾಡುವ ಅಮಾನುಲ್ಲಾ ಖಾನ್ ಮತ್ತು ಕಮಲ್ ಪಾಷ ಅವರುಗಳ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರನ್ನು ಸೋಲಿಸಲೇಬೇಕೆಂದು 2ನೇ ಬಾರಿ ಲೋಕಸಬೆ ಚುನಾವಣಾ ಅಖಾಡಕ್ಕೆ ಧುಮುಕಿರುವ ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ಹಲವಾರು ರೀತಿಯ ರಣತಂತ್ರ ರೂಪಿಸಿದ್ದರು. ಬಿರುಸಿನ ಪ್ರಚಾರದಲ್ಲೂ ತೊಡಿಗದ್ದರು.ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ರಿಜ್ವಾನ್ ಅವರಿಗೆ ಶಾಕ್ ನೀಡಿದೆ.
ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಸಚಿವ ಪುಟ್ಟರಾಜು ಅವರ ಆಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು. ಇದನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ನ ಎಲ್ಲ ನಾಯಕರು ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.
ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ, ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಪ್ರತಿಭಟನೆ ನಡೆಸಿದ 11 ಮಂದಿ ಪ್ರಮುಖ ನಾಯಕರ ವಿರುದ್ಧ ಐಟಿ ಅಧಿಕಾರಿಗಳು ಇತ್ತೀಚೆಗೆ ಚುನಾವಣಾ ಆಯೋಗ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿತ್ತು.
ಪ್ರತಿಭಟನೆ ಮೂಲಕ ಸರ್ಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ.ಆದಾಯ ತೆರಿಗೆ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಗ್ಗಸುತ್ತಿದ್ದಾರೆ ಎಂದು ಆರೋಪಿಸಿದರು.
ದೂರಿನ ಸಂಬಂಧ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಅದರ ಬೆನ್ನಲ್ಲೇ ನಿನ್ನೆ ಬಳ್ಳಾರಿ-ಚಿಕ್ಕೋಡಿಯಲ್ಲಿ ಆದಾಯ ತೆರಿಗೆಯವರ ದಾಳಿ ನಡೆದಿದೆ.
ಅಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಆಪ್ತರೇ ದಾಳಿಗೆ ಗುರಿಯಾಗಿದ್ದರು ಎಂಬ ಆರೋಪ ಎದುರಾಗಿತ್ತು. ಇಂದು ಸಹ ರಾಜಧಾನಿಯಲ್ಲಿ ನೇರವಾಗಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ರಿಜ್ವಾನ್ ಅರ್ಷದ್ಅವರ ಆಪ್ತರು ಹಾಗೂ ಚುನಾವಣೆಗೆ ಬೆನ್ನೆಲುಬಾಗಿದ್ದವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಇದು ಕಾಂಗ್ರೆಸ್ ಪಾಳೆಯವನ್ನು ಮತ್ತಷ್ಟು ಕೆರಳಿಸಿದ್ದು, ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆಯಲ್ಲಿ ತೊಡಗಿರುವ ನಾಯಕರು ಇತ್ತ ಗಮನಹರಿಸುತ್ತಾರೋ ಇಲ್ಲವೋ ಎಂಬುದನ್ನುಕಾದು ನೋಡಬೇಕಿದೆ.