ಪ್ರಧಾನಿ ನರೇಂದ್ರ ಮೋದಿ ಇಂದು ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ರಣಕಹಳೆ

ಚಿತ್ರದುರ್ಗ/ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಚುನಾವಣಾ ಪ್ರವಾಸ ಮಾಡಲಿದ್ದಾರೆ. ಇವತ್ತು ಮಧ್ಯಾಹ್ನ ಚಿತ್ರದುರ್ಗ ನಗರದ ಸರಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.  ನಂತರ ಸಂಜೆ 4:30ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾಷಣ ಮಾಡಲಿದ್ದಾರೆ.

ಮದಕರಿ ನಾಯಕನ ಕೋಟೆ ನಾಡಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬೃಹತ್ ಸಮಾವೇಶಕ್ಕೆ ಯಾವುದೇ ಲೋಪವಾಗದಂತೆ ಪೊಲೀಸ್ ಇಲಾಖೆ ನಗರದ ಸುತ್ತಲೂ, ಕಣ್ಗಾವಲು ಇಟ್ಟಿದೆ. ಮಹಾರಾಷ್ಟ್ರದಲ್ಲಿ ಸಮಾವೇಶ ಮುಗಿಸಿದ ನಂತರ ಇವತ್ತು ಚಿತ್ರದುರ್ಗಕ್ಕೆ ಆಗಮಿಸಲಿರುವ ಮೋದಿ, ಪ್ರಥಮ ಬಾರಿಗೆ ಜಿಲ್ಲೆಯ ಚಳ್ಳಕೆರೆ ತಾಲ್ಳೂಕಿನಲ್ಲಿರುವ DRDO ದ ಒಳಗಿರುವ ರನ್ ವೇಗೆ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 1.50 ಕ್ಕೆ ಆಗಮಿಸಲಿದ್ದಾರೆ. ನಂತರ ಅಲ್ಲಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದ ಹೆಲಿಪ್ಯಾಡ್​ ಗೆ  ಬಂದಿಳಿದು ಫೋಲೀಸ್ ಬಿಗಿ ಭದ್ರತೆಯೊಂದಿಗೆ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ಸಮಾವೇಶದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ಧಅರೆ.

ನಂತರ ಬಿಜೆಪಿಯ ಚಿತ್ರದುರ್ಗ ಅಭ್ಯರ್ಥಿ ಎ. ನಾರಾಯಣಸ್ವಾಮಿ, ದಾವಣಗೆರೆ ಅಭ್ಯರ್ಥಿ ಜಿಎಂ ಸಿದ್ದೇಶ್ವರ್, ತುಮಕೂರಿನ ಜಿ.ಎಸ್. ಬಸವರಾಜು ಪರ ಲೋಕಸಭಾ ಚುನಾವಣಾ ಪ್ರಚಾರ ಮಾಡಲಿದ್ದಾರೆ. ವೇದಿಕೆಯಲ್ಲಿ ರಾಜ್ಯನಾಯಕರಾದ ಮಾಜಿ ಡಿಸಿಎಂ. ಆರ್.ಅಶೋಕ್,ಹಾಗೂ ಕೋಟಾ ಶ್ರೀನಿವಾಸ್, ಸೇರಿಂದಂತೆ ಮೂರು ಕ್ಷೇತ್ರದ ಅಭ್ಯರ್ಥಿಗಳು, ಶಾಸಕರು,ಹಾಗೂ ಕಾರ್ಯಕ್ರಮದ ಪದಾದಿಕಾರಿಗಳು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮಕ್ಕೆ ಬರುವ ಜನರು ಕೂರಲು 35ಸಾವಿರ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.

ಮಧ್ಯಕರ್ನಾಟಕದ ಹೆಬ್ಬಾಗಿಲು ಎಂದೇ ಕರೆಯಲಾಗುವ ಚಿತ್ರದುರ್ಗದಲ್ಲಿ ನಡೆಯುವ ಈ ಬಿಜೆಪಿ ಬೃಹತ್ ಸಮಾವೇಶದಲ್ಲಿ ಜಿಲ್ಲೆಯ ಪಕ್ಕದ ಜಿಲ್ಲೆಗಳಾದ ದಾವಣಗೆರೆ, ತುಮಕೂರು, ಬಳ್ಳಾರಿ, ಹಾಗೆ ಶಿವಮೊಗ್ಗ ಕ್ಷೇತ್ರಗಳ ಜನರ ಆಗಮಿಸುವ ಸಾಧ್ಯತೆ ಇದೆ. ಒಟ್ಟು ಒಂದು ಲಕ್ಷಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಪೊಲೀಸ್ ಇಲಾಖೆ ಒಟ್ಟು 1,500 ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದೆ.

ಮೈಸೂರಿನಲ್ಲಿ ಸಂಜೆ:

ಚಿತ್ರದುರ್ಗದಲ್ಲಿ ಸಮಾವೇಶ ಮುಗಿಸಿಕೊಂಡು ಪ್ರಧಾನಿ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಬರಲಿದ್ದಾರೆ. ಸಂಜೆ 4:16ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿರುವ ಮೋದಿ ಸಂಜೆ 5ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಎಸ್​ವೈ ಹಾಗೂ ಹಳೆ ಮೈಸೂರು ಭಾಗದ ಬಿಜೆಪಿ ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಂಡ್ಯದಲ್ಲಿ ಬಿಜೆಪಿಯ ಬೆಂಬಲ ಪಡೆದಿರುವ ಸುಮಲತಾ ಅಂಬರೀಷ್ ಅವರನ್ನು ಮೋದಿ ಅವರು ಈ ಸಂದರ್ಭದಲ್ಲಿ ಭೇಟಿ ಮಾಡುತ್ತಾರಾ ಎಂಬ ಕುತೂಹಲವೂ ಇದೆ.

ಪ್ರಧಾನಿ ಮೋದಿ ಅವರು ಈ ಸಮಾವೇಶ ಮುಗಿಸಿಕೊಂಡು ಸಂಜೆ 5:45ರ ನಂತರ ಮೈಸೂರಿನಿಂದ ನಿರ್ಗಮಿಸಿ ತಮಿಳುನಾಡಿನ ಕೊಯಮತ್ತೂರಿಗೆ ತೆರಳಲಿದ್ದಾರೆ.

ಇದಾದ ನಂತರ ಮೋದಿ ಅವರು ಇನ್ನೂ 3 ಬಾರಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಏಪ್ರಿಲ್ 12ರಂದು ಕೊಪ್ಪಳ; ಏಪ್ರಿಲ್ 13ರಂದು ಮಂಗಳೂರು ಹಾಗೂ ಬೆಂಗಳೂರು, ಮತ್ತು ಏಪ್ರಿಲ್ 18ರಂದು ಚಿಕ್ಕೋಡಿ ಮತ್ತು ಬಾಗಲಕೋಟೆಯಲ್ಲಿ ಮೋದಿ ಅವರು ಚುನಾವಣಾ ಪ್ರಚಾರ ಮಾಡಲಿದ್ದಾರೆ.

ಇನ್ನು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಏಪ್ರಿಲ್ 10, 12, 17 ಮತ್ತು 20ರಂದು ದಾವಣಗೆರೆ, ಹಾಸನ, ತುಮಕೂರು, ಕಲಬುರ್ಗಿ, ವಿಜಯಪುರ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ