ಬೆಂಗಳೂರು,ಏ.8-ಉಪನಗರ ರೈಲು ಯೋಜನೆ ಜಾರಿಗೆ ತರಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಚಿವ ಕೃಷ್ಣಭೆರೇಗೌಡ ಅವರ ಪರವಾಗಿ ಚುನವಣಾ ಪ್ರಚಾರ ಕೈಗೊಂಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಪ್ರತಿಯೊಂದು ಕುಟುಂಬಕ್ಕೂ ಒಂದು ಮನೆ ಕೊಡುವುದು ನಮ್ಮ ಸರ್ಕಾರದ ಗುರಿಯಾಗಿದ್ದು, ಈಗಾಗಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಜನರ ಆಶೀರ್ವಾದದಿಂದ ಇನ್ನು 5 ವರ್ಷ ಆಡಳಿತ ನಡೆಸಲಿದೆ ಎಂದು ಹೇಳಿದರು.
ಕಳೆದ 10 ವರ್ಷಗಳ ಹಿಂದೆ ಪೆರಿಪರಲ್ ರಿಂಗ್ ರೋಡ್ ಯೋಜನೆ ಜಾರಿಗೆ ತರಲಾಗಿತ್ತು. ಆಗ 3000 ಕೋಟಿ ರೂ.ಉದ್ದೇಶಿತ ಈ ಯೋಜನೆಗೆ ಬೇಕಾಗಿತ್ತು.ಆದರೆ ಈಗ ಇದೇ ಯೋಜನೆಗೆ 17 ಸಾವಿರ ಕೋಟಿ ರೂ.ನೀಡಲಾಗುತ್ತಿದೆ ಎಂದರು.
ಬಿಜೆಪಿ ಅಭ್ಯರ್ಥಿಯು ನನ್ನನ್ನು ನೋಡಿ ಮತ ಹಾಕಬೇಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಮತ ಹಾಕಿ ಅಂತಾರೆ. ಮಾಧ್ಯಮದವರು ಮೋದಿ ಅವರ ಬಗ್ಗೆ ಎಷ್ಟೇ ಪ್ರಚಾರ ನೀಡಿದರೂ ಮತ್ತೆ ಅವರು ಪ್ರಧಾನಿಯಾಗುವುದಿಲ್ಲ ಎಂದರು.
ಯಾರು ದುಡಿಮೆ ಮಾಡುತ್ತಿದ್ದಾರೆ ಅವರನ್ನುಗುರುತಿಸಿ ಮತ ನೀಡಿ ಎಂದ ಅವರು, ಜನತಾದರ್ಶನ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೃಷ್ಣಭೆರೇಗೌಡ ಅವರನ್ನು ಆಯ್ಕೆ ಮಾಡಬೇಕಿದೆ.
ಸಂಸತ್ನಲ್ಲಿ ಈ ಜನರ ಸಮಸ್ಯೆಗಳ ಬಗ್ಗೆ ಅವರು ಧ್ವನಿ ಎತುತ್ತಾರೆ.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ಬಳಿಕ ನಾನು ನೆಗೆದು ಬೀಳುವುದಿಲ್ಲ. ಏಕೆಂದರೆ ನಿಮ್ಮಂಥ ಪುಣ್ಯಾತ್ಮ ಜನರ ಆಶೀರ್ವಾದ ನನ್ನ ಮೇಲಿದೆ ಎಂದು ಹೇಳಿದರು.
ನಮ್ಮ ಮಹಾಘಟ್ಬಂಧನ್ನ್ನು ಕಿಚಡಿ ಪಾರ್ಟಿ ಎನ್ನುತ್ತಾರೆ. ಆದರೆ 13 ಪಕ್ಷಗಳೊಂದಿಗೆ ಬಿಜೆಪಿ ಕೈ ಜೋಡಿಸಿದ್ದು ಯಾಕೆ. ನಮ್ಮ ಕಿಚಡಿ ಪಾರ್ಟಿಯಾದರೆ ನಿಮ್ಮದು ಯಾವುದು ಎಂದು ಪ್ರಧಾನಿ ಅವರನ್ನು ಕುಮಾರಸ್ವಾಮಿ ಪ್ರಶ್ನಿಸಿದರು.