ಜೆಡಿಎಸ್‍ಗೆ ದಾರಿ ತೋರಿಸಲು ಸಜ್ಜಾಗುತ್ತಿರುವ ಕಾಂಗ್ರೇಸ್-ಬಿಜೆಪಿ ಮುಖಂಡ ಆರ್.ಆಶೋಕ್

ಬೆಂಗಳೂರು,ಏ.8-ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷವೇ ಖೆಡ್ಡ ತೋಡಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.

ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಬಿಜೆಪಿಯವರು ಅಸ್ಥಿರಗೊಳಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ. ದೋಸ್ತಿ ಸರ್ಕಾರವನ್ನು ಪತನಗೊಳಿಸುವುದರಲ್ಲಿ ನಮ್ಮ ಪಕ್ಷದ ಪಾತ್ರವೇನಿಲ್ಲ. ಜೆಡಿಎಸ್‍ಗೆ ದಾರಿ ತೋರಿಸಲು ಕಾಂಗ್ರೆಸ್ ಸಜ್ಜಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ಮಾಧ್ಯಮಸಂವಾದದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರು ಅಲ್ಲಲ್ಲಿ ರೋಡ್ ಹಂಪ್‍ಗಳನ್ನು ಹಾಕಿದ್ದಾರೆ. ಇದರ ಹಿಂದೆ ಸಿದ್ದರಾಮಯ್ಯನವರ ಕೈವಾಡ ಇರುವುದು ಸ್ಪಷ್ಟವಾಗಿದೆ. ಫಲಿತಾಂಶ ಬಂದ ಬಳಿಕ ಸರ್ಕಾರ ಅಸ್ಥಿರಗೊಳಿಸುವುದರಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದಾಗ ವಿಧಾನಸೌಧದ ಮುಂದೆ ಘಟ್‍ಬಂಧನ್ ನಾಯಕರು ಸ್ವಚ್ಛ ಆಡಳಿತ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ವಾಗ್ದಾನ ಮಾಡಿದ್ದರು. ಆದರೆ ಕೇವಲ 10 ತಿಂಗಳ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಹಾದಿಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ.

ಮಂಡ್ಯ ತುಮಕೂರು ಹಾಸನ ಮತ್ತು ಮೈಸೂರು ಸೇರಿದಂತೆ ಅನೇಕ ಕಡೆ ಸಮ್ಮಿಶ್ರ ದೋಸ್ತಿ ಪಕ್ಷದ ಅಭ್ಯರ್ಥಿಗಳನ್ನೇ ಬೆಂಬಲಿಸುವುದಿಲ್ಲ ಎಂದುಕಾರ್ಯಕರ್ತರು ಬಹಿರಂಗವಾಗಿಯೇ ಸೆಡ್ಡು ಹೊಡೆದಿದ್ದಾರೆ.

ಎರಡೂ ಪಕ್ಷಗಳ ಕಾರ್ಯಕರ್ತರೇ ಮೋದಿ ಮೋದಿ ಮೋದಿ ಎಂದು ಜೈಕಾರ ಹಾಕುತ್ತಿದ್ದಾರೆ. ಇದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ರೇವಣ್ಣ ಅವರಿಗೆ ಮಾತ್ರ ಈ ಸರ್ಕಾರ ಬೇಕಾಯಿತು. ಉಳಿದವರಿಗೆ ಸರ್ಕಾರ ಯಾವಾಗ ಹೋಗುತ್ತದೆ ಎಂದು ಕಾಯುತ್ತಿದ್ದಾರೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲ ಎಂಬ ಆರೋಪ ಮಾಡುತ್ತಾರೆ. ಈವರೆಗೂ ನಡೆದಿರುವ ಬೆಳವಣಿಗೆಗಳಿಗೂ ಆಪರೇಷನ್ ಕಮಲಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗೆಲುವಿನ ಹೊಣೆ ನನ್ನದು:
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿಸೂರ್ಯ ಅವರ ಗೆಲುವಿನ ಹೊಣೆಯನ್ನು ನಾನೇ ತೆಗೆದುಕೊಂಡಿದ್ದೇನೆ. ಇದು ಬಿಜೆಪಿಯ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಇದನ್ನು ಚಿತ್ರದುರ್ಗದ ಕಲ್ಲಿನಕೋಟೆಯಷ್ಟೇ ಭದ್ರಪಡಿಸುತ್ತೇನೆ ಎಂದರು.

ಮೊದಲು ಈ ಕ್ಷೇತ್ರದಿಂದ ನಮ್ಮ ಹಿರಿಯ ನಾಯಕರಾದ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ರಾಜ್ಯ ಶಿಫಾರಸ್ಸು ಮಾಡಿತ್ತು.ಪ್ರತಿ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರು ಹೊಸದೊಂದು ಪ್ರಯೋಗ ಮಾಡುತ್ತಾರೆ.ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ನಳಿನ್‍ಕುಮಾರ್ ಕಟೀಲ್‍ಗೆ ಟಿಕೆಟ್ ನೀಡಲಾಯಿತು.

ಕೇಂದ್ರ ಸಂಸದೀಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯದೆಲ್ಲೆಡೆ ಮೋದಿ ಪರವಾದ ವಾತಾವರಣ 28 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳನ್ನುಗೆಲ್ಲಬೇಕೆಂಬಗುರಿಯೊದಿಗೆ ಚುನಾವಣಾ ಕಣಕ್ಕೆ ಧುಮುಕಿದ್ದೇವೆ. ಕಾಂಗ್ರೆಸ್ ಜೆಡಿಎಸ್‍ಗೆ ಹೋಲಿಸಿದರೆ ಪಕ್ಷದ ಚುನಾವಣಾ ಸಿದ್ದತೆ ಸಾಕಷ್ಟು ವೇಗವಾಗಿದೆ. ಎಲ್ಲೆಡೆ ಉತ್ತಮವಾದ ವಾತಾವರಣ ಇರುವುದರಿಂದ ನಾವು ಹೆಚ್ಚಿನ ಸ್ಥಾನಗಳನ್ನು ಗಳಿಸಲಿದ್ದೇವೆ ಎಂದರು.

ದೇಶಕ್ಕೆ ಇಂದು ಕಾಮ್‍ದಾರ್ ಮತ್ತು ನಾಮ್‍ದಾರ್ ಪ್ರಧಾನಿಯಾಗಬೇಕೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.ವಂಶ ಪಾರಂಪರ್ಯ ಮತ್ತು ಗಾಂಧಿ ಹೆಸರನ್ನೇ ಇಟ್ಟುಕೊಂಡಿರುವ ರಾಹುಲ್ ಗಾಂಧಿಪ್ರಧಾನಿಯಾಗಬೇಕೆ ಇಲ್ಲವೇ ಕೆಲಸ ಮಾಡುವ ಮೋದಿ ಪ್ರಧಾನಿಯಾಬೇಕೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ.

ಈ ಬಾರಿ ಕೇಂದ್ರದಲ್ಲಿ ಪುನಃ ಬಿಜೆಪಿ ನೇತೃತ್ವದ ಎನ್‍ಡಿಎಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಯಾವ ಭರವಸೆಗಳನ್ನು ನೀಡಿದ್ದೇವೋ ಅವುಗಳನ್ನು ಈಡೇರಿಸಿದ್ದೇವೆ. ದೇಶದ ಜನತೆಗೆ ಇಂದು ರಾಷ್ಟ್ರೀಯತೆ, ಭದ್ರತೆ, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಒತ್ತು ಕೊಡುತ್ತಾರೆ. ಬಿಜೆಪಿ ಇದರ ಪರವಾಗಿರುವುದರಿಂದ ಜನತೆ ನಮ್ಮನ್ನು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ