ನಿಖಿಲ್​ಗೆ ಬೆಂಬಲ ನೀಡದಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ; ಮಂಡ್ಯ ಕೈ ನಾಯಕರಿಗೆ ಸಿದ್ದರಾಮಯ್ಯ ಕಿವಿಮಾತು

ಬೆಂಗಳೂರು: ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಮರ್ಯಾದೆ, ಗೌರವದ ಪ್ರಶ್ನೆ. ಅದರಿಂದ ದೊಡ್ಡ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ.

ಅದಕ್ಕಾಗಿಯಾದ್ರೂ ನಿಖಿಲ್​ಗೆ ಬೆಂಬಲ ನೀಡಬೇಕು. ನಾನು, ದೇವೇಗೌಡರು ಮಂಡ್ಯಕ್ಕೆ ಪ್ರಚಾರಕ್ಕೆ ಬಂದಾಗ ನೀವೆಲ್ಲಾ ಜೊತೆಗಿರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಂಡ್ಯ ಕಾಂಗ್ರೆಸ್​ ನಾಯಕರಿಗೆ ಸೂಚನೆ ನೀಡಿದ್ದಾರೆ.

ಮೈಸೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಜೆಡಿಎಸ್​ನಿಂದ ಸೂಕ್ತ ಬೆಂಬಲ ದೊರಕದ ಕಾರಣ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ ನಿನ್ನೆ ಮಧ್ಯರಾತ್ರಿ ಮಂಡ್ಯ ಕಾಂಗ್ರೆಸ್​ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಈ ಮೊದಲು ಜೆಡಿಎಸ್​ ನಾಯಕರು ಕೂಡ ಈ ಬಗ್ಗೆ ಹೇಳಿದ್ದು, ಕಾಂಗ್ರೆಸ್​ನವರು ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡದಿದ್ದರೆ ಮೈಸೂರಲ್ಲಿ ನಾವು ಅದೇ ರೀತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬಿಜೆಪಿ ಕೂಡ ಬೆಂಬಲ ನೀಡಿದೆ. ಜೊತೆಗೆ ಸಿನಿಮಾ ನಟರ ಬೆಂಬಲವೂ ಇರುವುದರಿಂದ ದಿನದಿಂದ ದಿನಕ್ಕೆ ಸುಮಲತಾ ಪ್ರಬಲರಾಗುತ್ತಿದ್ದಾರೆ. ಇದು ದೋಸ್ತಿಗಳ ನಿದ್ದೆಗೆಡಿಸಿದೆ. ಸುಮಲತಾಗೆ ಕಾಂಗ್ರೆಸ್ ನಾಯಕರ ಬೆಂಬಲವಿದೆ ಎಂಬ ಮಾತೂ ಜೆಡಿಎಸ್​ ವಲಯದಿಂದ ಕೇಳಿಬರುತ್ತಿದೆ.

ಹೀಗಾಗಿ, ನಿಖಿಲ್ ಕುಮಾರಸ್ವಾಮಿ ಪರ ಕಾಂಗ್ರೆಸ್​ ಕಾರ್ಯಕರ್ತರು ಪ್ರಚಾರಕ್ಕೆ ಇಳಿಯದಿದ್ದರೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಮಂಡ್ಯದ ಕಾಂಗ್ರೆಸ್​  ನಾಯಕರಿಗೆ ಹೇಳಿದ್ದಾರೆ.

ಸಭೆಯಲ್ಲಿ ಮಾಜಿ ಸಚಿವ ಚೆಲುವರಾಯಸ್ವಾಮಿ ಮತ್ತು ತಂಡದವರು ಅಸಮಾಧಾನವನ್ನು ಹೊರಹಾಕಿದ್ದು, ಸಿಎಂ ಕುಮಾರಸ್ವಾಮಿಯವರು ಇದುವರೆಗೂ ಒಮ್ಮೆಯಾದರೂ ನಮ್ಮನ್ನು ಕರೆದು ಮಾತನಾಡಿದ್ದಾರಾ? ನಮಗೆ ಮಾನ, ಮರ್ಯಾದೆ, ಗೌರವ ಇಲ್ವಾ? ಅದೇನಾಗುತ್ತೋ ಆಗಲಿ ಬಿಡಿ ಸರ್, ನೋಡೇ ಬಿಡೋಣ ಎಂದು ಹೇಳಿದ್ದಾರೆ.

ಅದಕ್ಕೆ ಸಮಾಧಾನ ಮಾಡಿರುವ ಸಿದ್ದರಾಮಯ್ಯ, ನೀವು ನಿಖಿಲ್​ನನ್ನು ಗೆಲ್ಲಿಸದಿದ್ದರೆ ಕ್ಷೇತ್ರ ಕಾಂಗ್ರೆಸ್ ಕೈ ಬಿಟ್ಟು ಹೋಗುತ್ತದೆ. ಗೆದ್ದರೆ ಸುಮಲತಾ ಕಾಂಗ್ರೆಸ್​ಗೆ ಬರ್ತಾರೆ ಅಂದುಕೊಂಡಿದ್ದೀರಾ? ಈಗಾಗಲೇ ಬಿಜೆಪಿ ಅವರಿಗೆ ಬೆಂಬಲ ಘೋಷಿಸಿರುವುದರಿಂದ ಅವರು  ಬಿಜೆಪಿಗೆ ಹೋಗೋದು ಗ್ಯಾರಂಟಿ. ಅಲ್ಲಿ ಜೆಡಿಎಸ್ ಗೆದ್ದರೆ ಮುಂದೆ ಮತ್ತೆ ಆ  ಕ್ಷೇತ್ರವನ್ನು ಕಾಂಗ್ರೆಸ್​ ವಶ ಮಾಡಿಕೊಳ್ಳಬಹುದು. ಹಾಗಾಗಿ, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಏನೇ ಹೇಳಲಿ, ದೇವೇಗೌಡರು ನಮ್ಮ ಜೊತೆಗಿದ್ದಾರೆ. ಎಲ್ಲವನ್ನೂ ಸರಿ ಮಾಡೋಣ. ತಾಳ್ಮೆ ಕಳೆದುಕೊಳ್ಳಬೇಡಿ. ಹಾಸನ, ಮೈಸೂರು, ಮಂಡ್ಯ , ತುಮಕೂರಲ್ಲಿ ನಾವು ಗೆಲ್ಲಬೇಕಿದೆ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದು ಸಿದ್ದರಾಮಯ್ಯ ಮಂಡ್ಯದ 8 ಕ್ಷೇತ್ರಗಳ ಕೈ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ