ಬೆಂಗಳೂರು,ಏ.1-ಲೋಕಸಭೆ ಚುನಾವಣೆ ನಂತರವು ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ. ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಸುತ್ತಿರುವ ಪ್ರಜಾಪ್ರಭುತ್ವದ ವೈರಿಗಳಾದ ಬಿಜೆಪಿಯವರಿಗೆ ನನ್ನ ಬೆಂಬಲ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿಂದು ನಡೆದ ಸಂವಾದದಲ್ಲಿ ಮಾತನಾಡಿದ ಅವರು,ಚುನಾವಣೆ ನಂತರ ಸರ್ಕಾರ ಬೀಳಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರ ಸುಭದ್ರವಾಗಿರಲಿದೆ. ಯಡಿಯೂರಪ್ಪನವರಿಗೆ ಪ್ರತಿದಿನವೂ ವಿಧಾನಸೌಧದ ಮೂರನೇ ಮಹಡಿಯ ಮುಖ್ಯಮಂತ್ರಿ ಕುರ್ಚಿ ಮಾತ್ರ ಕನಸಿಗೆ ಬರುತ್ತದೆ. ಆದರೆ ಅದು ಈಡೇರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನ್ನು ಯಾವ ಶಾಸಕರು ಬಿಟ್ಟು ಹೋಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಆಯಾ ರಾಮ್, ಗಯಾ ರಾಮ್ ಇದ್ದದ್ದೇ. 1952ರಿಂದಲೂ ಇದನ್ನು ನೋಡಿಕೊಂಡು ಬಂದಿದ್ದೇವೆ. ಸಿದ್ದಾಂತಗಳಿಲ್ಲದವರು ಪಕ್ಷಾಂತರ ಮಾಡುತ್ತಾರೆ.ಕಾಂಗ್ರೆಸ್ನ ಕೆಲವರು ಬಿಜೆಪಿಗೆ ಹೋದಂತೆ ಬಿಜೆಪಿಯ ಬಹಳಷ್ಟು ಮಂದಿ ಕಾಂಗ್ರೆಸ್ಗೆ ಬಂದಿದ್ದಾರೆ.ಇದೆಲ್ಲ ಸಾಮಾನ್ಯ.
ಬಿಜೆಪಿಗೆ ಗುಲ್ಬರ್ಗದಲ್ಲಿ ಅಭ್ಯರ್ಥಿಗಳಿಲ್ಲ. ಹಾಗಾಗಿ ನಮ್ಮ ಪಕ್ಷದ ಶಾಸಕರಾಗಿದ್ದ ಉಮೇಶ್ ಜಾಧವ್ ಅವರಿಗೆ ಭಾರೀ ಆಸೆ ತೋರಿಸಿ ಕರೆದುಕೊಂಡು ಹೋಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸ್ಪರ್ಧೆಗಿಳಿಸಿದ್ದಾರೆ. ಜಾಧವ್ ವಿರುದ್ದ ನಾನು ಪಕ್ಷಾಂತರ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ. ನನ್ನ ದೂರು ಇತ್ಯರ್ಥ ಮಾಡಿ ನಂತರ ಜಾಧವ್ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಿದ್ದೇನೆ. ಅಂತಿಮ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದರು.
ಹಾಸನದಲ್ಲಿ ನಮ್ಮ ಪಕ್ಷದ ಮಾಜಿ ಶಾಸಕ ಎ.ಮಂಜು ಅವರಿಗೆ ಸಂಸದರನ್ನಾಗಿ ಮಾಡುವ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.
ಸಮನ್ವಯತೆ ಇದೆ:
ಕಾಂಗ್ರೆಸ್ ಮತ್ತು ಜೆಡಿಎಸ್ಮಧ್ಯೆ ಒಳ್ಳೆ ಸಮನ್ವಯತೆ ಇದೆ. 10 ತಿಂಗಳಿನಿಂದಲೂ ಸರ್ಕಾರ ಈಗ ಬೀಳುತ್ತೇ ಆಗ ಬೀಳುತ್ತೆ ಎಂದು ಹೇಳುತ್ತಲೇ ಬಂದಿದ್ದಾರೆ.
ಸರ್ಕಾರವನ್ನು ಕೆಡವಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದರೆ ಅದು ಯಶಸ್ವಿಯಾಗಿಲ್ಲ. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್- ಕಾಂಗ್ರೆಸ್ ನಡುವೆ ಸಣ್ಣಪುಟ್ಟ ಕಿರಿಕಿರಿಗಳಿವೆ. ನಾನು ಮತ್ತು ದೇವೇಗೌಡರು ಜಂಟಿಯಾಗಿ ಪ್ರಚಾರಕ್ಕೆ ಹೋದರೆ ಅದು ನಿವಾರಣೆಯಾಗುತ್ತದೆ.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮೂರು ಲೋಕಸಭಾಕ್ಷೇತ್ರಗಳಲ್ಲಿ ಎರಡು ಲೋಕಸಭಾ ಕ್ಷೇತ್ರಗಳನ್ನು ಮತ್ತು ಎರಡು ವಿಧಾನಸಭಾ ಕ್ಷೇತ್ರಗಳನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿವೆ. ಶಿವಮೊಗ್ಗದಲ್ಲಿ ಸ್ವಲ್ಪ ಪ್ರಯತ್ನ ಪಟ್ಟಿದ್ದರೂ ಗೆಲ್ಲುವ ಸಾಧ್ಯತೆ ಇತ್ತು ಎಂದು ಹೇಳಿದರು.
ಸರ್ಕಾರ ಪತನಗೊಳಿಸಲು ಬಿಜೆಪಿ ಆಕಾಶ-ಭೂಮಿ ಒಂದು ಮಾಡಿ ಪ್ರಯತ್ನಪಟ್ಟರೂ ಅದು ಯಶಸ್ವಿಯಾಗುವುದಿಲ್ಲ. ಕೋಮುವಾದಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಯವರು ನನಗೆ ರಾಜಕೀಯವಾಗಿ ವೈರಿಗಳು.ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್ಐಟಿ ರಚನೆ:
ಆಪರೇಷನ್ ಕಮಲ ಕುರಿತಂತೆ ಯಡಿಯೂರಪ್ಪನವರ ಆಡಿಯೋ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುವಂತೆ ಸ್ಪೀಕರ್ ರಮೇಶ್ಕುಮಾರ್ ಅವರು ಸಲಹೆ ನೀಡಿದರು.ನಾನು ಅದನ್ನು ಒಪ್ಪಿದ್ದೇನೆ. ಮುಖ್ಯಮಂತ್ರಿಯವರು ಒಪ್ಪಿದ್ದಾರೆ.ಶೀಘ್ರವೇ ಎಸ್ಐಟಿ ರಚನೆಯಾಗಲಿದೆ.ನಾನು ಆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇನೆ.
ಯಡಿಯೂರಪ್ಪ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ನಂತರ ನಾನು ಮೃದುಧೋರಣೆ ಅನುಸರಿಸಿದ್ದೇನೆ ಎಂಬುದು ಸುಳ್ಳು.ಎದುರಿಗೆ ಸಿಕ್ಕಾಗ ಮಾತನಾಡಿಸುವುದು, ಆರೋಗ್ಯ ವಿಚಾರಿಸುವುದು ಮಾನವೀಯತೆ.ಅದರ ಹೊರತಾಗಿ ನಾನು ಯಡಿಯೂರಪ್ಪನವರೊಂದಿಗೆ ಯಾವುದೇ ವಿಷಯ ಚರ್ಚೆ ಮಾಡಿಲ್ಲ ಎಂದರು.
ಸಚಿವ ಜಿ.ಟಿ.ದೇವೇಗೌಡರು ಊರಿನಲ್ಲಿ ಇಲ್ಲದೇ ಇರುವುದರಿಂದ ಮೈಸೂರು ಲೋಕಸಭಾ ಕ್ಷೇತ್ರದ ಪ್ರಚಾರಕ್ಕೆ ಬಂದಿರಲಿಲ್ಲ. ಮುಂದೆ ಬರುತ್ತಾರೆ.ಸಚಿವ ಸಾ.ರಾ.ಮಹೇಶ್ ತಮ್ಮೊಂದಿಗೆ ಪ್ರಚಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯನವರೊಂದಿಗೆ ನಾನು ಕಣ್ಣಿನಲ್ಲೇ ಮಾತನಾಡುತ್ತೇನೆ ಎಂಬ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಸಾಹಿತಿ. ಕಾವ್ಯಗಳಲ್ಲಿ ಕಣ್ಣಿನಲ್ಲೇ ಮಾತನಾಡುವ ಪ್ರಸಂಗಗಳಿವೆ. ಆ ಕಾರಣಕ್ಕೆ ಹೇಳಿರಬಹುದು ಎಂದರು.