ಬೆಂಗಳೂರು, ಮಾ.31- ಏ. 18ರಂದು ಮತದಾನ ನಡೆಯುವ ರಾಜ್ಯದ ಮೊದಲಹಂತದ 14ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 241ಅಭ್ಯರ್ಥಿಗಳು ಸ್ಪರ್ಧಿಸಿದ್ದು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅತಿಕಡಿಮೆ 6ಮಂದಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು 31ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಮೊದಲಹಂತದ ಚುನಾವಣೆಯಲ್ಲಿ ಒಟ್ಟು 226ಪುರುಷ 15ಮಹಿಳಾ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.ಪಕ್ಷೇತರ ಅಭ್ಯರ್ಥಿಗಳೆ 133ಮಂದಿ ಚುನಾವಣಾ ಕಣದಲ್ಲಿದ್ದು ಇವರಲ್ಲಿ 5ಮಂದಿ ಮಹಿಳೆಯರು ಸೇರಿದ್ದಾರೆ.
ರಾಷ್ಟ್ರೀಯ ಪಕ್ಷಗಳಿಂದ 37ಮಂದಿ ಪುರುಷರು, 2ಮಹಿಳೆಯರು ಸೇರಿದಂತೆ ಒಟ್ಟು 39ಮಂದಿ ಚುನಾವಣಾ ಕಣದಲ್ಲಿದ್ದಾರೆ.
ಪ್ರಾದೇಶಿಕ ಪಕ್ಷಗಳಿಂದ 4ಮಂದಿ ಸ್ಪರ್ಧೆಯಲ್ಲಿದ್ದರೆ, ನೋಂದಾಯಿತ ಪಕ್ಷಗಳಿಂದ 59ಪುರುಷ ಹಾಗೂ 6ಮಂದಿ ಮಹಿಳಾ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಮೊದಲ ಹಂತದ 14ಕ್ಷೇತ್ರಗಳ ಪೈಕಿ ಜೆಡಿಎಸ್ 4, ಕಾಂಗ್ರೆಸ್ 10, ಬಿಜೆಪಿ 13ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಮಂಡ್ಯದಲ್ಲಿ ನಟಿ ಸುಮಲತಾ ಅಂಬರೀಷ್, ಬೆಂಗಳೂರು ಕೇಂದ್ರದಲ್ಲಿ ನಟ ಪ್ರಕಾಶ್ರಾಜ್ ಸೇರಿದಂತೆ 133ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಮಂಡ್ಯ, ಮೈಸೂರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ತಲಾ 22ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ತಲಾ 15ಮಂದಿ ಚುನಾವಣಾ ಕಣದಲ್ಲಿದ್ದಾರೆ ಉಳಿದಂತೆ ಉಡುಪಿ-ಚಿಕ್ಕಮಗಳೂರಿನಲ್ಲಿ 12, ಹಾಸನದಲ್ಲಿ 6, ದಕ್ಷಿಣಕನ್ನಡ 13, ಚಿತ್ರದುರ್ಗ 19,ಚಾಮರಾಜನಗರ 10, ಕೋಲಾರ 14, ಬೆಂಗಳೂರು ದಕ್ಷಿಣ 25 ಹಾಗೂ ಬೆಂಗಳೂರು ಉತ್ತರ 31 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.