ಮಂಡ್ಯ ಚುನಾವಣಾಧಿಕಾರಿ ಮುಖ್ಯಮಂತ್ರಿಗಳ ಕೈಗೊಂಬೆಯಾಗಿರುವ ಹಿನ್ನಲೆ-ವರ್ಗಾವಣೆಗೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಬಿಜೆಪಿ

ಬೆಂಗಳೂರು, ಮಾ.31- ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿ ಮುಖ್ಯಮಂತ್ರಿಗಳ ಮಧ್ಯವರ್ತಿಯಂತೆ ವರ್ತಿಸಿರುವ ಮಂಡ್ಯ ಚುನಾವಣಾಧಿಕಾರಿ ಮಂಜುಶ್ರೀ ಅವರನ್ನು ತಕ್ಷಣವೇ ವರ್ಗಾವಣೆಗೊಳಿಸಿ ಬೇರೊಬ್ಬರನ್ನು ನಿಯೋಜನೆ ಮಾಡಬೇಕೆಂದು ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಒತ್ತಡಕ್ಕೆ ಮಣಿದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರವನ್ನು ಕಾನೂನು ಬಾಹಿರವಾಗಿ ಸಿಂಧುಗೊಳಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಮುಖ್ಯಮಂತ್ರಿಗಳ ಕೈಗೊಂಬೆಯಂತೆ ವರ್ತಿಸಿರುವ ಅವರನ್ನು ಕೂಡಲೇ ಆಯೋಗ ವರ್ಗಾವಣೆ ಮಾಡಿ ಬೇರೊಬ್ಬರನ್ನು ನೇಮಕ ಮಾಡಬೇಕೆಂದು ರಾಜ್ಯ ಬಿಜೆಪಿ ಸಹ ವಕ್ತಾರರಾದ ಎ.ಎಚ್.ಆನಂದ್ ಮತ್ತು ಎಸ್.ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯ ಮಾಡಿದರು.

ಎ.ಎಚ್.ಆನಂದ್ ಮಾತನಾಡಿ, ತಮ್ಮ ತಪ್ಪನ್ನು ಮುಚ್ಚಿಹಾಕಲು ಪಕ್ಷೇತರ ಅಭ್ಯರ್ಥಿ ಸುಮಲತಾಗೆ ನೋಟಿಸ್ ನೀಡಿ ಒಂದೇ ದಿನದಲ್ಲಿ ಉತ್ತರಿಸಬೇಕೆಂದು ಹೇಳಿರುವುದು ಕೂಡ ಅವರ ಧಾಷ್ಟ್ರ್ಯತನವನ್ನು ತೋರುತ್ತದೆ. ಜಿಲ್ಲಾಧಿಕಾರಿಗಳಾಗಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕೆ ಹೊರತು ಸರ್ಕಾರದ ಕೈಗೊಂಬೆಯಂತೆ ವರ್ತಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯಸರ್ಕಾರ ಚುನಾವಣಾಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬುದಕ್ಕೆ ಶನಿವಾರ ಚುನಾವಣಾ ಆಯೋಗ ಹಾಸನ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದೇ ಸಾಕ್ಷಿಯಾಗಿದೆ.

ಮಂಜುಶ್ರೀ ಅವರನ್ನು ವರ್ಗಾವಣೆಗೊಳಿಸದಿದ್ದರೆ ಮಂಡ್ಯದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಚುನಾವಣಾ ಆಯೋಗದ ಮುಖ್ಯಾಧಿಕಾರಿ ಸಂಜೀವ್‍ಕುಮಾರ್, ಮಂಜುಶ್ರೀ ಪ್ರಕರಣವನ್ನು ತನಿಖೆಗೊಳಪಡಿಸುವುದಾಗಿ ಹೇಳಿರುವುದರಿಂದ ಅವರು ಕರ್ತವ್ಯ ನಿರ್ವಹಿಸಲು ನೈತಿಕತೆ ಕಳೆದುಕೊಂಡಿದ್ದಾರೆ.ಇಡೀ ಚುನಾವಣಾ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿದ್ದಾರೆ ಎಂದು ದೂರಿದರು.

ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಏಕೆ ಆತಂಕಕ್ಕೆ ಒಳಗಾಗಬೇಕೆಂದು ಪ್ರಶ್ನಿಸಿದರು.

ಅಲ್ಲದೆ, ಐಟಿ ಅಧಿಕಾರಿಗಳು ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಬೇಕೆಂದು ಚುನಾವಣಾ ಆಯೋಗಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಷ್ಟ್ರಪತಿಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬರೆದಿರುವ ಪತ್ರ ಅತ್ಯಂತ ಖಂಡನಾರ್ಹ.ಇದು ಒಕ್ಕೂಟ ವ್ಯವಸ್ಥೆಯಲ್ಲಿ ತಲೆ ತಗ್ಗಿಸುವ ವಿಷಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಅಕ್ರಮವಾಗಿ ಹಣ, ಹೆಂಡ ಹಂಚಿ ಭ್ರಷ್ಟ ಅಧಿಕಾರಿಗಳ ಬಲದಿಂದ ಗೆಲುವು ಸಾಧಿಸಲು ಸಮ್ಮಿಶ್ರ ಸರ್ಕಾರ ಮುಂದಾಗಿರುವುದು ಈ ಘಟನೆಗಳಿಂದಲೇ ಸಾಬೀತಾಗಿದೆ.ಮತದಾರರಿಗೆ ತುಚ್ಛವಾಗಿ ಟೀಕೆ ಮಾಡಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ