ಬೆಂಗಳೂರು:ಮಾ-18: ಹೂಡಿಕೆ ಹೆಸರಿನಲ್ಲಿ ಹಲವರಿಗೆ ನೂರಾರು ಕೋಟಿ ವಂಚಿಸಿರುವ ವಿಕ್ರಂ ಇನ್ವೆಸ್ಟ್ಮೆಂಟ್ ಕಂಪನಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೂ ಭಾರಿ ವಂಚನೆ ಮಾಡಿದೆ ಎಂದು ತಿಳಿದುಬಂದಿದೆ.
ರಾಹುಲ್ ದ್ರಾವಿಡ್ ಅವರಿಗೆ ವಂಚನೆ ಮಾಡಿರುವ ಬಗ್ಗೆ ಸದಾಶಿವ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ದೂರು ದಾಖಲಿಸಿರುವ ದ್ರಾವಿಡ್, ತಮ್ಮಲ್ಲಿ ಹೂಡಿಕೆ ಮಾಡಿದವರಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಸಂಸ್ಥೆಯ ಆಡಳಿತ ಮಂಡಳಿ ಹೇಳಿದ ಕಾರಣ ನಾನು 2014ರಿಂದ 2018ರ ಫೆಬ್ರುವರಿವರೆಗೆ 20 ಕೋಟಿ ರೂ ಹೂಡಿಕೆ ಮಾಡಿದ್ದೆನು. ಇದೀಗ ಲಾಭಾಂಶವೂ ಇಲ್ಲ, ನಾನು ಹೂಡಿಕೆ ಮಾಡಿದ್ದ ಹಣವನ್ನು ಸಹ ಪೂರ್ಣವಾಗಿ ಹಿಂತಿರುಗಿಸಲಿಲ್ಲ. ಇದುವರೆವಿಗೆ ಸಂಸ್ಥೆಯು ನನಗೆ 16 ಕೋಟಿ ರೂ, ಗಳನ್ನು ಮಾತ್ರವೇ ನೀಡಿದ್ದು ಇನ್ನೂ 4 ಕೋಟಿ ರೂ. ವಂಚನೆ ಮಾಡಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಹೇಳಿದ್ದಾರೆ.
ವಿಕ್ರಮ್ ಗ್ಲೋಬಲ್ ಇನ್ವೆಸ್ಟ್ಮೆಂಟ್, ವಿಕ್ರಮ್ ಗ್ಲೋಬಲ್ ಸೊಲ್ಯುಷನ್ ಎಂಬ ಹೆಸರುಗಳಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಸಂಸ್ಥೆಯು ಶಾಖೆಗಳನ್ನು ತೆರೆದು 1,800 ಜನರಿಗೆ ಸುಮಾರು 350-400 ಕೋಟಿ ವಂಚನೆ ಮಾಡಲಾಗಿದೆ. ಇನ್ನು ವಿಕ್ರಂ ಇನ್ವೆಸ್ಟ್ಮೆಂಟ್ ಮಾಲೀಕ ರಾಘವೇಂದ್ರ ಶ್ರೀನಾಥ್ ಈಗಾಗಲೇ ಬಂಧನಕೊಳಗಾಗಿದ್ದು ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ವಂಚನೆ ಸಂಬಂಧ ಬನಶಂಕರಿ ಮಾತ್ರವಲ್ಲದೇ, ವಿಜಯ ನಗರ, ಜಯನಗರ ಠಾಣೆಗಳಲ್ಲೂ ಆರೋಪಿ ಗಳ ವಿರುದ್ಧ ದೂರು ದಾಖಲಾಗುತ್ತಿದ್ದು, ಸದ್ಯದಲ್ಲೇ ಆರೋಪಿಗಳನ್ನು ಆಯಾ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆ ಸುವ ಸಾಧ್ಯತೆಯಿದೆ.