ನವದೆಹಲಿ, ಮಾ.22- ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗಿಂತಲೂ ಕಾಂಗ್ರೆಸ್ ಹೈಕಮಾಂಡ್ಗೆ ತುಮಕೂರು ಕ್ಷೇತ್ರ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಲಿ ಸಂಸದರಿದ್ದರೂ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ಕ್ಷೇತ್ರ ಕಳೆದುಕೊಂಡ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಬಂಡಾಯದ ಕಹಳೆ ಊದಿದ್ದಾರೆ.
ತಮ್ಮ ತವರು ಜಿಲ್ಲೆಯಲ್ಲೇ ಕ್ಷೇತ್ರ ಉಳಿಸಿಕೊಳ್ಳಲಾಗದೆ ಹಿನ್ನಡೆ ಅನುಭವಿಸಿದ ಡಾ.ಜಿ.ಪರಮೇಶ್ವರ್ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಎದುರು ಪಟ್ಟು ಹಿಡಿದು ಕುಳಿತಿದ್ದಾರೆ.
ಶತಾಯ-ಗತಾಯ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಬೇಕು. ಈ ಹಿಂದೆ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ನಿರ್ಧಾರವಾದಂತೆ ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಲು ಮನವೊಲಿಸಿ, ಕಾಂಗ್ರೆಸ್ನ ಐದು ಮಂದಿ ಶಾಸಕರಿದ್ದೇವೆ. ಖುದ್ದಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವನಿದ್ದೇನೆ. ನಮ್ಮೆಲ್ಲಾ ಶಕ್ತಿ ಬಳಸಿ ದೇವೇಗೌಡರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ತುಮಕೂರು ಕ್ಷೇತ್ರವನ್ನು ಮಾತ್ರ ಮುದ್ದಹನುಮೇಗೌಡರಿಗೆ ಬಿಟ್ಟುಕೊಡಿ ಎಂದು ಪರಮೇಶ್ವರ್ ಒತ್ತಡ ಹೇರಿದ್ದು, ಹೈಕಮಾಂಡ್ ನಾಯಕರು ಗೊಂದಲಕ್ಕೆ ಸಿಲುಕಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪರಮೇಶ್ವರ್ ಅವರ ಮನವೊಲಿಸಲು ವಿಫಲರಾಗಿದ್ದು, ಅಂತಿಮ ನಿರ್ಧಾರವನ್ನು ರಾಹುಲ್ಗಾಂಧಿ ತೆಗೆದುಕೊಳ್ಳಲಿದ್ದಾರೆ ಎಂದು ಕೈ ಚೆಲ್ಲಿದ್ದಾರೆ. ಪರಮೇಶ್ವರ್ ಅವರು ರಾಹುಲ್ಗಾಂಧಿ ಅವರನ್ನೂ ಭೇಟಿ ಮಾಡಿ ತಮ್ಮ ಒತ್ತಡದ ತಂತ್ರವನ್ನು ಮುಂದುವರೆಸಿದ್ದಾರೆ.
ಈ ನಡುವೆ ತುಮಕೂರು ಅಥವಾ ಬೆಂಗಳೂರು ಉತ್ತರ ಇವೆರಡರಲ್ಲಿ ಯಾವುದರಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಅಂತಿಮಗೊಂಡಿಲ್ಲ.
ಬಹುತೇಕ ಭಾನುವಾರ ದೇವೇಗೌಡರು ತಮ್ಮ ನಿರ್ಧಾರ ತಿಳಿಸುತ್ತಾರೆ ಎಂದು ಹೇಳಲಾಗಿದ್ದು, ಅಲ್ಲಿವರೆಗೂ ಗೊಂದಲಗಳು ಮುಂದುವರಿಯಲಿವೆ.
ದೇವೇಗೌಡರು ತುಮಕೂರನ್ನೇ ಆಯ್ಕೆ ಮಾಡಿಕೊಂಡರೆ ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಾಗಿ ಕೈ ಚೆಲ್ಲಲಿದ್ದು, ಮುದ್ದಹನುಮೇಗೌಡ ಟಿಕೆಟ್ ವಂಚಿತರಾಗಲಿದ್ದಾರೆ.